

ಕೋಲಾರ: ನಗರ ಜಿಲ್ಲಾ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿರುವ ಸಿಂಥಟಿಕ್ ಟ್ರ‍್ಯಾಕ್ ಕಾಮಗಾರಿ ಅಪೂರ್ಣವಾಗಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಮುಂದೂಡಬೇಕು ಎಂದು ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಜಯದೇವ್ ಒತ್ತಾಯಿಸಿದರು.
ನಗರದ ಕ್ರೀಡಾಂಗಣದ ಸಭಾಂಗಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಕ್ರೀಡಾಂಗಣ ಹಾಗೂ ಸಿಂಥಟಿಕ್ ಟ್ರ‍್ಯಾಕ್ ನಿರ್ಮಾಣದಲ್ಲಿ ಹಲವು ಗಣ್ಯರ ಶ್ರಮವಿದ್ದು, ಎಲ್ಲರನ್ನೂ ಕರೆಯಿಸಿ ಹಬ್ಬದ ರೀತಿ ಉದ್ಘಾಟನಾ ಕಾರ್ಯಕ್ರಮ ಏರ್ಪಡಿಸಬೇಕು ಎಂದರು.
ಸಚಿವರಾದ ಕೆ.ಎಚ್.ಮುನಿಯಪ್ಪ, ಜಿ.ಪರಮೇಶ್ವರ್, ಬೈರತಿ ಸುರೇಶ್, ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಸೇರಿ ಹಲವು ಜನಪ್ರತಿನಿಽಗಳ ಶ್ರಮವಿದೆ. ಇದರ ಜತೆಗೆ ಕ್ರೀಡಾ ಪಟುಗಳು, ಹಿರಿಯರ ಸಹಕಾರವು ಸಿಕ್ಕಿದೆ, ಅವರನ್ನೆಲ್ಲ ಗುರುತಿಸಿ ಅಭಿನಂದಿಸುವ ಕೆಲಸವಾಗಬೇಕಿದೆ ಎಂದು ತಿಳಿದರು.
ಕ್ರೀಡಾಂಗಣದಲ್ಲಿ ಇನ್ನೂ ಸಣ್ಣ ಪುಟ್ಟ ಕೆಲಸಗಳು ಆಗಬೇಕಿದೆ, ಆದಾನಂತರ ಉದ್ಘಾಟನೆ ಮಾಡಿದರೆ ಅರ್ಥ ಸಿಗುತ್ತದೆ. ಈಗ ನಿರ್ಮಾಣವಾಗಿರುವ ಸಿಂಥಟಿಕ್ ಟ್ರಾ÷್ಯಕ್‌ನಲ್ಲಿ ಅಲ್ಲಲ್ಲಿ ನೀರು ನಿಲ್ಲುತ್ತದೆ. ಇದರಿಂದಾಗಿ ಕಾಮಗಾರಿಯು ಅಪೂರ್ಣವಾಗಿದ್ದು, ಆ.20ರ ನಂತರ ಕೆಲಸ ಕೈಗೆತ್ತಿಕೊಳ್ಳಲಿದ್ದಾರೆ ಎಂದು ಹೇಳಿದರು.
ಹಿರಿಯ ಕ್ರೀಡಾಪಟು ಅಂಚೆ ಅಶ್ವತ್ಥ್ ಮಾತನಾಡಿ, ಜಿಲ್ಲೆಯಲ್ಲಿ ಕ್ರೀಡಾ ಸೌಲಭ್ಯಗಳ ಕೊರತೆಯಿಂದ ಹಲವು ಪಂದ್ಯಾವಳಿಗಳಿಂದ ವಂಚನೆಗೆ ಒಳಗಾಗಬೇಕಿತ್ತು, ಇದೀಗ 7 ಕೋಟಿ ರೂ. ವೆಚ್ಚದಲ್ಲಿ ಸಿಂಥಟಿಕ್ ಟ್ರ‍್ಯಾಕ್ ನಿರ್ಮಿಸಿರುವುದರಿಂದ ಅಂತಾರಾಷ್ಟ್ರೀಯ ಕ್ರೀಡಾಕೂಟ ನಡೆಸುವ ಅರ್ಹತೆ ಪಡೆದುಕೊಂಡಿದ್ದು, ಸರ್ಕಾರಗಳು ಹೆಚ್ಚಿನ ಅವಕಾಶಗಳನ್ನು ಜಿಲ್ಲೆಗೆ ಕಲ್ಪಿಸಬೇಕು ಎಂದು ಮನವಿ ಮಾಡಿದರು.