

ಶಿವಮೊಗ್ಗ: ಸರ್ಕಾರದ ಅಧೀನದಲ್ಲಿರುವ ಅಜ್ಜಂಪುರದ ಅಮೃತ್ ಮಹಲ್ ತಳಿ ಸಂರಕ್ಷಣಾ ಕೇಂದ್ರದಿಂದ ಜ.21, 22ರಂದು ನಡೆಯುತ್ತಿರುವ ಹರಾಜು ಪ್ರಕ್ರಿಯೆ ಮುಂದೂಡುವಂತೆ ಎನ್‌ಎಸ್‌ಯುಐ ಶಿಕಾರಿಪುರ ತಾಲೂಕು ಅಧ್ಯಕ್ಷ ಶಿವು ಹುಲ್ಮಾರ್ ಒತ್ತಾಯಿಸಿದರು.
ಶಿಕಾರಿಪುರದಲ್ಲಿ ಜ.21, 22, ಕಪ್ಪನಹಳ್ಳಿ ಸೇರಿ ತಾಲೂಕಿನ ವಿವಿಧೆಡೆ ಮಾರಿಜಾತ್ರೆಗಳು ನಡೆಯುವುದರಿಂದ ಈ ದಿನಗಳಲ್ಲಿ ರೈತರು ಭಾಗವಹಿಸಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ಹರಾಜು ದಿನವನ್ನು ಮುಂದೂಡಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಸರ್ಕಾರ, ಪಶುವೈದ್ಯ ಇಲಾಖೆ, ಮೈಸೂರು ಮಹಾರಾಜರು ಕಳಕಳಿಯಿಂದ ಅಮೃತ್ ಮಹಲ್ ತಳಿಗಳನ್ನು ಸಂರಕ್ಷಿಸಿದ್ದು, ಶ್ರೇಷ್ಠ ಬಹುಪಯೋಗಿ ತಳಿಗಳಾಗಿವೆ. ಹೋರಿ ಬೆದರಿಸುವ ಹಬ್ಬಕ್ಕಾಗಿ ಈ ತಳಿಗಳನ್ನು ರೈತರು ಸಾಕುತ್ತಾರೆ. ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಯ ರೈತರು ಹೋರಿಹಬ್ಬ ಆಚರಣೆ ಮಾಡುವುದರಿಂದ ಈ ತಳಿಗಳನ್ನು ಹರಾಜಿನಲ್ಲಿ ಖರೀದಿಸುತ್ತಾರೆ ಎಂದರು.
ಮಾರಿಹಬ್ಬ ಇರುವ ಕಾರಣ ಅಮೃತ್ ಮಹಲ್ ತಳಿ ಹಾಗೂ ಜ.8ರಂದು ನಡೆಯುವ ಹಳ್ಳಿಕಾರ್ ತಳಿಗಳ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಸಚಿವ ಮಧು ಬಂಗಾರಪ್ಪ, ಕೃಷಿ, ಪಶು ಇಲಾಖೆ ಸಚಿವರು, ಶಾಸಕ ಬಿ.ವೈ.ವಿಜಯೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಸೇರಿ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗೂಡಿ ಹರಾಜು ಪ್ರಕ್ರಿಯೆ ದಿನಾಂಕ ಮುಂದೂಡಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಮಾರುತಿ ಹುಲ್ಮಾರ್, ರವಿ ಕೊಟ್ಟ, ನಾಗರಾಜು, ವೀರೇಂದ್ರ ಪಾಟೀಲ್, ಕಾಂತಪ್ಪ ಸಂಕ್ರಿ, ಆನಂದಪ್ಪ, ತಮ್ಮಣ್ಣ ಸುದ್ದಿಗೋಷ್ಠಿಯಲ್ಲಿದ್ದರು.