

ಬೆಂಗಳೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನದ ಸಂಸದ ಪ್ರಜ್ವಲ್ ರೇವಣ್ಣನ ಹುಡುಕಿ ಕೊಟ್ಟವರಿಗೆ ೧ ಲಕ್ಷ ರೂ. ಬಹುಮಾನ ಘೋಷಣೆ ಹಾಗೂ ಸನ್ಮಾನ ಮಾಡುವುದಾಗಿ ಜನತಾ ಪಕ್ಷದ ಮುಖಂಡ ನಾಗೇಶ್ ನೇತೃತ್ವದಲ್ಲಿ ನಗರದಲ್ಲಿ ಪೋಸ್ಟರ್ ಅಭಿಯಾನ ನಡೆಯಿತು.
ನಗರದ ಶಿವಾನಂದ ಸರ್ಕಲ್, ಆನಂದ್‌ರಾವ್ ಸರ್ಕಲ್ ಸೇರಿ ಶೇಷಾದ್ರಿಪುರದ ಕೆಲವೆಡೆ ‘ವಾಟೆಂಡ್ ಪ್ರಜ್ವಲ್’ ಎಂಬ ಪೋಸ್ಟರ್ ಅಂಟಿಸಿ, ಹಂಚಿದರು. ಹಾಸನ ಸೇರಿ ರಾಜ್ಯದ ಕೆಲ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳ ಪ್ರಕರಣದಲ್ಲಿ ಕಳೆದ ೧೫ ದಿನಗಳಿಂದ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಟ್ಟವರಿಗೆ ೧ ಲಕ್ಷ ರೂ. ಬಹುಮಾನ ನೀಡಿ ಸನ್ಮಾನಿಸುವವುದಾಗಿ ಪೋಸ್ಟರ್‌ನಲ್ಲಿದೆ.
ಈ ಅಭಿಯಾನದ ಬಗ್ಗೆ ಮಾತನಾಡಿದ ಜನತಾ ಪಕ್ಷದ ಮುಖಂಡ ನಾಗೇಶ್, ಸಾಕಷ್ಟು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಜ್ವಲ್ ರೇವಣ್ಣ ಬಂಧಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ವಿಫಲವಾಗಿದೆ. ಹೀಗಾಗಿ ಈ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್ ರೇವಣ್ಣನನ್ನು ಹುಡುಕಿ ಕೊಡುವ ಸಾರ್ವಜನಿಕರಿಗೆ ೧ ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿದೆ. ಜತೆಗೆ ಸನ್ಮಾನ ಮಾಡಲಾಗುವುದು ಎಂದರು.
ಇದೇ ವೇಳೆ ಪೋಸ್ಟರ್ ಅಭಿಯಾನ ಮಾಹಿತಿ ಪಡೆದ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಕೂಡಲೇ ಸ್ಥಳಕ್ಕೆ ತೆರಳಿ ನಾಗೇಶ್ ಹಾಗೂ ಇತರರನ್ನು ಠಾಣೆಗೆ ಕರೆದೊಯ್ದರು. ಬಳಿಕ ಮುಚ್ಚಳಿಕೆ ಪತ್ರ ಬರೆಸಿಕೊಂಡು, ಠಾಣಾ ಜಾಮೀನು ನೀಡಿ ಬಿಡುಗಡೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.