ಅಂಚೆ ಕಚೇರಿಯಲ್ಲಿ ಸಿಗುತ್ತಿಲ್ಲ ಪೋಸ್ಟಲ್ ಆರ್ಡರ್; ಸಾರ್ವಜನಿಕರ ಪರದಾಟ

31-RNR-01A
Published on

ರಾಣೆಬೆನ್ನೂರ: ನಗರದ ಅಂಚೆ ಕಚೇರಿಯಲ್ಲಿ ಪೋಸ್ಟಲ್ ಆರ್ಡರ್‌ಗಳು ಖಾಲಿಯಾಗಿ ಹದಿನೈದು ದಿನಗಳು ಕಳೆಯುತ್ತ ಬಂದಿದ್ದು, ಸಾರ್ವಜನಿಕರು ಪೋಸ್ಟಲ್ ಆರ್ಡರ್‌ಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ನಗರದಲ್ಲಿ ತಾಲೂಕಿಗೆ ದೊಡ್ಡದಾದ ಅಂಚೆ ಕಚೇರಿ ಇರುವುದರಿಂದ ನಗರ ಸೇರಿ ತಾಲೂಕಿನ ಬಹುತೇಕ ಜನತೆ ಪೋಸ್ಟಲ್ ಆರ್ಡರ್ ಬೇಕು ಎಂದರೆ ಇಲ್ಲಿಗೆ ಆಗಮಿಸುತ್ತಾರೆ. ಹೀಗೆ ಬಂದ ಜನರನ್ನು ಅಂಚೆ ಕಚೇರಿ ಅಧಿಕಾರಿಗಳು ಪೋಸ್ಟಲ್ ಆರ್ಡರ್ ಖಾಲಿಯಾಗಿವೆ ಎಂದು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಆದ್ದರಿಂದ ಸ್ಥಳೀಯ ಸಾವಿರಾರು ಜನತೆ ಅಂಚೆ ಪತ್ರಗಳನ್ನು ಕಳುಹಿಸಲಾಗದೆ ಪೇಚಾಡುವಂತಾಗಿದೆ.
ಉದ್ಯೋಗದ ಅರ್ಜಿ ಹಾಕಲು, ಆರ್‌ಟಿಐನಡಿ ಮಾಹಿತಿ ಕೇಳಲು ಹಾಗೂ ಪತ್ರಗಳ ಮೂಲಕ ವ್ಯವಹಾರ ಮಾಡುವವರಿಗೆ 10 ರೂ.ನಿಂದ ಹಿಡಿದು 100 ರೂ.ವರೆಗಿನ ಮುಖ ಬೆಲೆಯ ಪೋಸ್ಟಲ್ ಆರ್ಡರ್ ಕಡ್ಡಾಯವಾಗಿ ಬೇಕೆ ಬೇಕು. ಆದರೀಗ ಅವರೆಲ್ಲ ಪೋಸ್ಟಲ್ ಆರ್ಡರ್ ಇಲ್ಲದೆ ಪರದಾಡುತ್ತಿದ್ದಾರೆ.
ಅಂಚೆ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ವಿಚಾರಿಸಿದರೆ ಸರ್ಕಾರದಿಂದ ಬಂದಿಲ್ಲ. ನಾವೇನು ಮಾಡಬೇಕು ಎನ್ನುವ ಹಾರಿಕೆ ಉತ್ತರ ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ. ಯಾವಾಗ ಬರುತ್ತದೆ ಎಂದು ಕೇಳಿದರೂ ಉತ್ತರಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಅಂಚೆ ಕಚೇರಿಯಲ್ಲಿ ಪೋಸ್ಟಲ್ ಆರ್ಡರ್ ದೊರೆಯುವಂತೆ ಮಾಡಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net