ದ್ವೇಷ ಭಾವನೆ ಹರಡುವ ಸಂದೇಶ ಪೋಸ್ಟ್

sgr manavi (2)
ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಭಾವನೆ ಹರಡುವ ಸಂದೇಶ ಹರಿಬಿಟ್ಟ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಳಗುಪ್ಪ ಗ್ರಾಮಸ್ಥರು ಎಎಸ್ಪಿ ಡಾ. ಬೆನಕಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ದಿನೇಶ್ ಶಿರವಾಳ, ಎಂ.ಎಸ್.ಕೊಟ್ರಪ್ಪ, ರಾಮಚಂದ್ರಪ್ಪ ಇತರರಿದ್ದರು.
Published on

ಸಾಗರ: ಮಡಿವಾಳ ಹಾಗೂ ಅಕ್ಕಸಾಲಿಗ (ಶೆಟ್ರು) ಸಮಾಜವನ್ನು ನಿಂದಿಸಿ, ಸಮುದಾಯಗಳ ನಡುವೆ ದ್ವೇಷಭಾವನೆ ಹುಟ್ಟುವಂತಹ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ತಾಲೂಕಿನ ತಾಳಗುಪ್ಪ ಗ್ರಾಮದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ರೈತ ಸಂಘದ ನೇತೃತ್ವದಲ್ಲಿ ಗ್ರಾಮಸ್ಥರು ಎಎಸ್ಪಿ ಡಾ. ಬೆನಕ ಪ್ರಸಾದ್ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ತಾಳಗುಪ್ಪ ಗ್ರಾಮದಲ್ಲಿ ಮಡಿವಾಳ ಮತ್ತು ಅಕ್ಕಸಾಲಿಗ ಸಮುದಾಯವನ್ನು ಗುರಿಯಾಗಿಸಿ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡುವ ಸಂದೇಶ ಪೋಸ್ಟ್ ಮಾಡಿದ್ದಾನೆ. ಅವಾಚ್ಯ ಶಬ್ದಗಳನ್ನು ಬಳಸಿ ಸಮುದಾಯಗಳ ನಡುವೆ ಕಂದಕ, ದ್ವೇಷ ಹರಡುವ ಕೆಲಸ ಮಾಡಿದ್ದಾನೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ದೂರಿದರು.

ತಾಳಗುಪ್ಪದಲ್ಲಿ ಎಲ್ಲ ಜಾತಿ, ಧರ್ಮಗಳ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಯಾರೋ ಒಬ್ಬಿಬ್ಬರು ಮಾಡುವ ಇಂತಹ ಕೆಟ್ಟ ಕೆಲಸದಿಂದ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ಸಮುದಾಯವನ್ನು ಒಡೆಯುವ ಪ್ರಯತ್ನ ಮಾಡಿದ ವ್ಯಕ್ತಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸಾಗರ ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಎಂ.ಎಸ್.ಕೊಟ್ರಪ್ಪ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ನಿಮ್ಮನ್ನು ಆಳುವುದಕ್ಕೆ ನಮ್ಮ ಅಣ್ಣನೇ ಬೇಕು ಎಂದು ಸಂದೇಶ ಹರಿಬಿಟ್ಟಿದ್ದಾನೆ. ಎಲ್ಲ ಜಾತಿ, ಸಮುದಾಯದವರು ಜನಪ್ರತಿನಿಧಿಯನ್ನು ಆಯ್ಕೆ ಮಾಡುತ್ತೇವೆ. ಯಾರೋ ಒಬ್ಬರ ಮತದಿಂದ ಗೆಲ್ಲಲು ಸಾಧ್ಯವಿಲ್ಲ. ಆದರೆ ಒಂದು ಸಮುದಾಯವನ್ನು ವೈಭವೀಕರಿಸುವ ನಿಟ್ಟಿನಲ್ಲಿ ಸಣ್ಣ ಸಮುದಾಯಗಳನ್ನು ಹೀಗಳೆಯುವುದು ಸರಿಯಲ್ಲ. ಸಂದೇಶ ಹರಿಬಿಟ್ಟ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದರು.

ಎಎಸ್ಪಿ ಡಾ. ಬೆನಕ ಪ್ರಸಾದ್ ಮಾತನಾಡಿ, ತಾಳಗುಪ್ಪ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳ ಮೂಲಕ ಯಾರೇ ಶಾಂತಿ, ಸೌಹಾರ್ದತೆ ಕದಡುವ ಸಂದೇಶ ಹಾಕಿದರೆ ಕಾನೂನಿನ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದರು.

ರೈತ ಸಂಘದ ಡಾ. ರಾಮಚಂದ್ರಪ್ಪ ಮನೆಘಟ್ಟ, ರಮೇಶ್ ಕೆಳದಿ, ಗಣಪತಿ ಮುಸೊಳ್ಳಿ, ಚಂದ್ರಶೇಖರ್, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net