

ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಕರೊನಾ ಕುರಿತು ನಿರ್ಬಂಧಗಳನ್ನು ಬದಲಾಯಿಸಿ, ಎಂದಿನಂತೆ ಸೇವೆಗಳಿಗೆ ಅವಕಾಶ ಕಲ್ಪಿಸಿಕೊಡುವ ಕುರಿತು ಸದ್ಯದಲ್ಲೆ ತೀರ್ವನವಾಗಲಿದೆ. ಲಾಕ್ಡೌನ್ ಕಾರಣಕ್ಕೆ ಕಳೆದ ಆರು ತಿಂಗಳಿಂದ ದೇವಸ್ಥಾನಗಳಲ್ಲಿ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ತಿಂಗಳಿಂದ ತೆರೆಯಲಾಗಿದೆಯಾದರೂ ಅರ್ಚಕರು ಪೂಜೆ ನೆರವೇರಿಸಲು ಹಾಗೂ ಸಾರ್ವಜನಿಕರಿಗೆ ಮಂಗಳಾರತಿ ನೀಡಲು ಮಾತ್ರ ಅವಕಾಶವಿದೆ. ತೀರ್ಥ ಪ್ರಸಾದ ಸೇರಿ ಕಲ್ಯಾಣೋತ್ಸವ, ಅರ್ಚನೆ, ಅಭಿಷೇಕ, ವಿಶೇಷ ಅಲಂಕಾರಗಳು ಸೇರಿ ದೇವಸ್ಥಾನಗಳಿಗೆ ಅನುಗುಣವಾಗಿ ಅನೇಕ ಸೇವೆಗಳನ್ನು ನಡೆಸಲು ಅನುಮತಿ ನೀಡಲಾಗಿಲ್ಲ. ಕರೊನಾ ನಿರ್ಬಂಧಗಳನ್ನು ಹಂತಹಂತವಾಗಿ ಸಡಿಲಿಕೆ ಮಾಡುತ್ತಿರುವ ಕಾರಣ ದೇವಸ್ಥಾನಗಳಲ್ಲಿ ಸೇವೆಗೆ ಅವಕಾಶ ನೀಡಬೇಕು ಎಂದು ಸಾರ್ವಜನಿಕರು ಹಾಗೂ ಅರ್ಚಕರಿಂದ ಒತ್ತಾಯ ಕೇಳಿಬರುತ್ತಿತ್ತು.
ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ ಆಗಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ಶ್ರೀವತ್ಸ ನೇತೃತ್ವದ ನಿಯೋಗವು ಸಚಿವರನ್ನು ಗುರುವಾರ ಭೇಟಿ ಮಾಡಿ ಮನವಿ ಮಾಡಿತು. ಈ ಕುರಿತು ‘ವಿಜಯವಾಣಿ’ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ದೇವಸ್ಥಾನಗಳಲ್ಲಿ ಸೇವೆಗೆ ಅವಕಾಶ ನೀಡುವ ಪ್ರಸ್ತಾವನೆ ಇದೆ. 1-2 ದಿನದಲ್ಲೆ ಈ ಕುರಿತು ಸಂಬಂಧಿಸಿದವರ ಸಭೆ ನಡೆಸಲಾಗುತ್ತದೆ. ಶೀಘ್ರದಲ್ಲೆ ತೀರ್ಮಾನ ತಿಳಿಸಲಾಗುತ್ತದೆ ಎಂದಿದ್ದಾರೆ.