ಅಧಿಕಾರಿಗಳಿಗೆ ಸಕಾರಾತ್ಮಕ ಮನಸ್ಥಿತಿ ಅವಶ್ಯ; ಡಾ.ಸಿ.ಎನ್.ಮಂಜುನಾಥ ಸಲಹೆ, ವಿ.ಬಾಲಸುಬ್ರಮಣ್ಯನ್ ಅವರಿಗೆ ರೇಷ್ಮೆರತ್ನ ಪ್ರಶಸ್ತಿ

silk
Published on

ಬೆಂಗಳೂರು: ಸಾಮಾನ್ಯವಾಗಿ ಪ್ರಮಾಣಿಕ ಅಧಿಕಾರಿಗಳಿಂದ ಉತ್ತಮ ಕೆಲಸವಾಗುತ್ತದೆ ಎಂಬ ಭಾವನೆ ಇದೆ. ಪ್ರಮಾಣಿಕತೆಯ ಜೊತೆಗೆ ಸಕಾರಾತ್ಮಕ ಮನಸ್ಥಿತಿ ಇದ್ದರೆ ಇನ್ನೂ ಹೆಚ್ಚು ಉಪಯುಕ್ತ ಕೆಲಸಗಳಾಗುತ್ತವೆ ಆದ್ದರಿಂದ ಅಧಿಕಾರಿಗಳು ಸಕಾರಾತ್ಮಕ ಮನಸ್ಥಿತಿ ರೂಢಿಸಿಕೊಳ್ಳಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ ಸಲಹೆ ನೀಡಿದ್ದಾರೆ. ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣ್ಯನ್ ಅವರಿಗೆ ರೇಷ್ಮೆ ರತ್ನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಜನರು ನೀಡುವ ಪ್ರಶಸ್ತಿಗಳು ಸರ್ಕಾರ ನೀಡುವ ಪ್ರಶಸ್ತಿಗಿಂತ ಶ್ರೇಷ್ಠ. ಒಬ್ಬ ಅಧಿಕಾರಿಗೆ ನಿವೃತ್ತಿಯ ನಂತರವೂ ಜನ ಸನ್ಮಾನ ಮಾಡಿ ಪ್ರೀತಿ, ಗೌರವ ತೋರಿಸುತ್ತಾರೆಂದರೆ ಅದು ಅವರು ಅಧಿಕಾರದಲ್ಲಿದ್ದಾಗ ಮಾಡಿದ ಕೆಲಸವನ್ನು ಸೂಚಿಸುತ್ತದೆ. ಬಾಲಸುಬ್ರಮಣ್ಯನ್ ಅವರ ಕರ್ತವ್ಯ ಪ್ರಜ್ಞೆ, ಪ್ರಮಾಣಿಕತೆ, ಇಚ್ಛಾಶಕ್ತಿ ಮತ್ತು ಸಕಾರಾತ್ಮಕ ಗುಣಧರ್ಮ ಇಂದಿನ ಎಲ್ಲ ಅಧಿಕಾರಿಗಳಿಗೆ ಮಾದರಿ. ಅವರ ಜೀವನ ಚರಿತ್ರೆಯನ್ನು ಅಗತ್ಯವಾಗಿ ಸರ್ಕಾರಿ ಅಧಿಕಾರಿಗಳು ಓದಬೇಕು. ರಾಜ್ಯ ರೇಷ್ಮೆ ಇಲಾಖೆಯಲ್ಲಿದ್ದ ಕಡಿಮೆ ಅವಧಿಯಲ್ಲಿ ರೇಷ್ಮೆ ಬೆಳೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿ ದೇಶಮಟ್ಟದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಯ ಯೋಜನೆಯನ್ನು ಸಾಕಾರಗೊಳಿಸಿದ್ದರು. ಬಾಲಸುಬ್ರಮಣ್ಯ ರೇಷ್ಮೆಯ ವಿಷಯ ತಜ್ಞರಲ್ಲದಿದ್ದರೂ ಇಚ್ಛಾಶಕ್ತಿ ಮತ್ತು ಸಕಾರಾತ್ಮಕ ಚಿಂತನೆಯ ಫಲವಾಗಿ ಈ ಯಶಸ್ಸು ಸಾಧಿಸಲು ಸಾಧ್ಯವಾಯಿತು. ರೇಷ್ಮೆ ಉತ್ಪಾದನೆಯಲ್ಲಿ ಭಾರತ 2ನೇ ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದ್ದು, ಕರ್ನಾಟಕದ ಸಾಧನೆ ಗಮನಾರ್ಹವಾಗಿರುವುದರ ಹಿಂದೆ ಬಾಲು ಅವರ ಶ್ರಮ ಇದೆ ಎಂದು ಡಾ. ಮಂಜುನಾಥ ತಿಳಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ, ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ, ವಿ.ಬಾಲಸುಬ್ರಮಣ್ಯನ್ ಕೇಂದ್ರ ಮತ್ತು ರಾಜ್ಯದ ರೇಷ್ಮೆ ಇಲಾಖೆಯ ಹಲವು ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕಾರ್ಯಾಂಗದ ಜವಾಬ್ದಾರಿ ಪ್ರಮುಖ

ಸಮಾಜದಲ್ಲಿ ಅಧಿಕಾರವುಳ್ಳವರನ್ನು, ಶ್ರೀಮಂತರನ್ನು ಪೂಜಿಸುವ ಸಂಸ್ಕೃತಿ ಹೆಚ್ಚಾಗಿದೆ. ಆದರೆ ಉತ್ತಮ ಕೆಲಸ ಮಾಡುವವರನ್ನು ಗುರುತಿಸುವ ಕೆಲಸ ಸಿಲ್ಕ್ ಅಸೋಸಿಯೇಷನ್ ಆ್ ಇಂಡಿಯಾ ಮಾಡಿರುವುದು ಅಭಿನಂದನೀಯ ಎಂದು ಮಾಜಿ ಲೋಕಾಯುಕ್ತ ಸಂತೋಷ ಹೆಗಡೆ ಹೇಳಿದ್ದಾರೆ. ಓರ್ವ ಲೋಕಾಯುಕ್ತನಾಗಿ ಅಧಿಕಾರಿಗಳ ಬಗ್ಗೆ ನನಗಿರುವ ಭಾವನೆ ಬಾಲಸುಬ್ರಮಣ್ಯನ್ ಅವರ ಜೀವನ ಚರಿತ್ರೆ ನೋಡಿದ ನಂತರ ಬದಲಾಗಿದೆ. ಅಧಿಕಾರಿಗಳಲ್ಲೂ ಕೂಡ ಪ್ರಮಾಣಿಕರಿದ್ದಾರೆಂಬುದಕ್ಕೆ ಇಂತವರು ಸಾಕ್ಷಿ. ಪ್ರಜಾಪ್ರಭುತ್ವದ ಮೂರು ಅಂಗಗಳಲ್ಲಿ ಕಾರ್ಯಾಂಗದ ಜವಾಬ್ದಾರಿ ಹೆಚ್ಚಿದೆ. ಸಮಾಜದಲ್ಲಿ ಬದಲಾವಣೆಯಾಗಬೇಕಾದರೆ ಕಾರ್ಯಾಂಗದ ಪಾತ್ರ ಪ್ರಮಖವಾಗಿದೆ ಎಂದರು.

"ರಾಜ್ಯದಲ್ಲಿ ಎರಡು ಶತಮಾನಗಳ ಇತಿಹಾಸ ಇರುವ ರೇಷ್ಮೆ ಬೆಳೆಗೆ ಸರ್ಕಾರಗಳ ರಕ್ಷಣೆ ಅಗತ್ಯ. ರೇಷ್ಮೆ ಇಲಾಖೆಯಲ್ಲಿ ಶೇ.70 ಸಿಬ್ಬಂಧಿಗಳ ಕೊರತೆ ಇದೆ. ಹೀಗೆ ಮುಂದುವರೆದರೆ ಇಲಾಖೆಯೇ ಮುಚ್ಚುವ ಸ್ಥಿತಿ ಎದುರಾಗಲಿದೆ. ಸರ್ಕಾರ ಇಲಾಖೆಯನ್ನು ಸದೃಢಗೊಳಿಸಲು ಮುಂದಾಗಬೇಕು.” -ವಿ.ಬಾಲಸುಬ್ರಮಣ್ಯನ್, ನಿವೃತ್ತ ಐಎಎಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net