

ಕೊಟ್ಟಾಯಂ: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಲಕ್ಷಾಧಿಪತಿ ಅಥವಾ ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ.
ಸಾಲ ಮಾಡಿ ಮೊದಲ ಬಾರಿಗೆ ಲಾಟರಿ ಟಿಕೆಟ್ ಖರೀದಿಸಿದ್ದ ಕೂಲಿಕಾರನಿಗೆ ಮೊದಲ ಪ್ರಯತ್ನದಲ್ಲೇ ಅದೃಷ್ಟ ದೇವತೆ ಒಲಿದಿದ್ದು, ಬರೋಬ್ಬರಿ 75 ಲಕ್ಷ ರೂ. ಬಹುಮಾನ ಒಲಿದುಬಂದಿದೆ. ಕೂಲಿಕಾರನ ಹೆಸರು ಬಾಬುಲಾಲ್ (55). ಈ ಬಾಬುಲಾಲ್ ಸಿಐಟಿಯು ಅಟ್ಟಿಂಕುಝಿ ಯೂನಿಯನ್‌ನ ಸದಸ್ಯರಾಗಿದ್ದಾರೆ. ಸ್ತ್ರೀ ಶಕ್ತಿ ಲಾಟರಿಯಿಂದ ಪ್ರಥಮ ಬಹುಮಾನ 75 ಲಕ್ಷ ರೂ.ಗಳನ್ನು ಪಡೆದಿದ್ದಾರೆ.
ನಿನ್ನೆ ಬೆಳಗ್ಗೆ ಯೂನಿಯನ್ ಕಚೇರಿಗೆ ಲಾಟರಿ ಮಾರಾಟಗಾರ್ತಿಯೊಬ್ಬಳು ಬಂದಿದ್ದಳು. ಕೆಲವೇ ಟಿಕೆಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗಿದ್ದರಿಂದ ಒಂದೇ ಒಂದು ಟಿಕೆಟ್ ಖರೀದಿಸುವಂತೆ ಬಾಬುಲಾಲ್ಗೆ ಮನವಿ ಮಾಡಿದ್ದಳು. ತನ್ನ ಕೈಯಲ್ಲಿ ಹಣವಿಲ್ಲ ಎಂದು ಬಾಬುಲಾಲ್ ಹೇಳಿದಾಗ ಹಣ ಆಮೇಲೆ ಕೊಡಬಹುದು ಎಂದು ಹೇಳಿ ಎರಡು ಲಾಟರಿ ಕೊಟ್ಟಳು. ಇದೀಗ ಆ ಲಾಟರಿಯಲ್ಲಿ ಒಂದಕ್ಕೆ ಪ್ರಥಮ ಬಹುಮಾನ ಲಭಿಸಿದೆ. ಮಹಿಳೆ ಕನಿಯಾಪುರಂನಲ್ಲಿರುವ ಧನಮ್ ಏಜೆನ್ಸಿಯಿಂದ ಮಾರಾಟಕ್ಕೆ ಟಿಕೆಟ್ ಖರೀದಿಸಿದ್ದಳು.
ಬಡ ಕುಟುಂಬಕ್ಕೆ ಸೇರಿದ ಬಾಬುಲಾಲ್ ಚಿಕ್ಕವಯಸ್ಸಿನಲ್ಲೇ ಹಮಾಲಿ ಕೆಲಸ ಮಾಡುವ ಮೂಲಕ ಕುಟುಂಬವನ್ನು ಸಾಕುತ್ತಿದ್ದಾರೆ. ಬಾಬುಲಾಲ್ ಪತ್ನಿ ಶೋಭಾನಾ ಮನೆ ಕೆಲಸದವಳಾಗಿ ಕೆಲಸ ಮಾಡುತ್ತಿದ್ದಾರೆ. ದಂಪತಿಗೆ ಅರುಣ್ ಮತ್ತು ಅಜಯಲಾಲ್ ಹೆಸರಿನ ಇಬ್ಬರು ಮಕ್ಕಳಿದ್ದಾರೆ. 4. 5 ಸೆಂಟ್ಸ್ ಜಮೀನಿನಲ್ಲಿ ಚಿಕ್ಕಪ್ಪ, ಸಹೋದರ ಮತ್ತು ಬಾಬುಲಾಲ್ ಅವರ ಕುಟುಂಬ ಒಟ್ಟಿಗೆ ವಾಸಿಸುತ್ತಿದೆ. ಬಹುಮಾನದ ಟಿಕೆಟ್ ಸಂಖ್ಯೆ SE 989926 ಅನ್ನು ಕಜಕೂಟಂನಲ್ಲಿರುವ ಕೆನರಾ ಬ್ಯಾಂಕ್ಗೆ ಬಾಬುಲಾಲ್ ಹಸ್ತಾಂತರಿಸಿದ್ದಾರೆ. (ಏಜೆನ್ಸೀಸ್)