ಆಹಾರ ಮೇಳದಲ್ಲಿ ಜನಮನ ಸೆಳೆದ ಖಾದ್ಯಗಳು

food
: ಸಾಗರದ ವೀರಶೈವ ಸಮಾಜ ಮತ್ತು ಅಕ್ಕನ ಬಳಗ ಆಯೋಜಿಸಿದ್ದ ಆಹಾರ ಮೇಳ ಜನಮನ ಸೆಳೆಯಿತು.
Published on

ಸಾಗರ: ಇಲ್ಲಿನ ವೀರಶೈವ ಸಮಾಜ ಅಕ್ಕನ ಬಳಗ ಶನಿವಾರ ರಾತ್ರಿ ನಗರದಲ್ಲಿ ಆಯೋಜಿಸಿದ್ದ ಆಹಾರ ಮೇಳದಲ್ಲಿ ಬಾಣಸಿಗರು ತರಾವರಿಯ ದೇಶೀಯ ಖಾದ್ಯಗಳನ್ನು ತಯಾರಿಸಿ ಗಮನ ಸೆಳೆದರು.
ಹಸಿಹಪ್ಪಳ, ಅಕ್ಕಿರೊಟ್ಟಿ, ಗೋಧಿರೊಟ್ಟಿ ಇದನ್ನು ಚಪ್ಪರಿಸಲು ಬದನೆಕಾಯಿಯ ಎಣ್ಣೆಗಾಯಿ ಪಲ್ಯ. ಅಲ್ಲದೆ ಬಿಸಿಬಿಸಿ ಹಾಲುಗರಿಗೆ, ದೋಸೆ ಕ್ಯಾಂಪ್‌ಗೆ ಜನ ಮುಗಿಬಿದ್ದರು. ತಯಾರಿಸಿದ ಖಾದ್ಯಗಳೆಲ್ಲಾ ಬೇಗಬೇಗನೆ ಖಾಲಿಯಾಗುತ್ತಿತ್ತು. ಇನ್ನು ವಿವಿಧ ಬಗೆಯ ಬಿಸಿಬಿಸಿ ವಡೆಯನ್ನು ಜನರು ಸವಿದರು. ಪಡ್ಡನ್ನು ಹೆಚ್ಚು ಜನ ಖರೀದಿಸುತ್ತಿದ್ದುದು ಕಂಡುಬಂತು.
ಮೇಳದ ಕುರಿತು ಅಕ್ಕನ ಬಳಗದ ಅಧ್ಯಕ್ಷೆ ಕಾವ್ಯಾ ಗುರುಪ್ರಸಾದ್ ಪ್ರತಿಕ್ರಿಯಿಸಿ, ಇಂದು ಹೊಸ ರೀತಿಯ ಆಧುನಿಕ ಖಾದ್ಯಗಳು ಬಂದ ಮೇಲೆ ದೇಶೀಯ ಖಾದ್ಯಗಳೇ ಮರೆತು ಹೋಗುತ್ತಿವೆ. ಯುವಜನರು ಾಸ್ಟ್‌ುಡ್‌ಗೆ ಒಗ್ಗಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಒತ್ತಡದ ಬದುಕಿನಲ್ಲಿ ದೇಶೀಯ ಆಹಾರಗಳ ಮಹತ್ವವನ್ನು ನಾವು ಪರಿಚಯಿಸಬೇಕಾಗಿದೆ. ಹಾಗಾಗಿ ಇಂತಹ ಆಹಾರ ಮೇಳಗಳು ಹೆಚ್ಚಾಗಿ ನಡೆಯಬೇಕಾಗಿದೆ ಎಂದರು.
ವೀರಶೈವ ಸಮಾಜ ಮತ್ತು ವೀರಶೈವ ಯುವಕರ ಸಂಘ ಅಕ್ಕನ ಬಳಗಕ್ಕೆ ಸಹಕಾರ ನೀಡಿ ಇಂತಹ ಆಹಾರ ಮೇಳ ಆಯೋಜಿಸುತ್ತಿದ್ದೇವೆ. ಇಂದಿನ ಆಹಾರ ಮೇಳದಲ್ಲಿ ಸುಮಾರು 70 ಸಾವಿರದಿಂದ 1 ಲಕ್ಷದಷ್ಟು ವಹಿವಾಟು ನಡೆದಿದ್ದು ಮಹಿಳೆಯರ ಖಾದ್ಯ ತಯಾರಿಕೆಯ ಕೌಶಲ್ಯ ಪರಿಚಯಿಸಿದಂತಾಗಿದೆ ಎಂದರು.
ಆಹಾರ ಮೇಳದಲ್ಲಿ ಬಾಣಸಿಗರಾಗಿ ಮಂಜುಳಾ, ಲತಾ, ಅನುಪಮಾ, ಕವಿತಾ, ಶ್ವೇತಾ ಕೋರಿ, ಸ್ವಪ್ನಾ ದಳವಾಯಿ, ರತ್ನಮ್ಮ ಜಂಬಿಗೆ, ಕೋಮಲ ಅಂಬಳಿಕೆ ಇತರರು ಪಾಲ್ಗೊಂಡಿದ್ದರು. ಯುವ ಸಂಘಟನೆಗಳು ಪಾನೀಯಗಳನ್ನು ತಯಾರಿಸಲು ಮಣ್ಣಿನ ಕುಡಿಕೆಗಳನ್ನು ಬಳಸಿದ್ದು ಜನತೆಯನ್ನು ಆಕರ್ಷಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net