ದೈಹಿಕ ಸಂಬಂಧ ಸುಂದರವಾದದ್ದು: ಚರ್ಚೆಗೆ ಗ್ರಾಸವಾದ ಪೋಪ್ ಹೇಳಿಕೆ

pope
Published on

ವ್ಯಾಟಿಕನ್​ ಸಿಟಿ: ಕ್ರೈಸ್ತ ಧರ್ಮದ ಕ್ಯಾಥೊಲಿಕ್​ ಪಂಥದ ಅತ್ಯಂತ ಉನ್ನತ ಸ್ಥಾನದಲ್ಲಿರುವ ಧರ್ಮ ಗುರು ಪೋಪ್​ ಫ್ರಾನ್ಸಿಸ್ ದೈಹಿಕ ಸಂಬಂಧ ಒಂದು ಸುಂದರ ವಿಚಾರ ಎಂದು ಇತ್ತೀಚೆಗೆ ಬಿಡುಗಡೆ ಆದ ಡಾಕ್ಯುಮೆಂಟರಿ ಒಂದರಲ್ಲಿ ಹೇಳಿದ್ದಾರೆ. ಈ ಡಾಕ್ಯುಮೆಂಟರಿ ಬುಧವಾರ ಬಿಡುಗಡೆ ಆಗಿದ್ದು ಅದರಲ್ಲಿ ಲೈಂಗಿಕತೆಯ ಉತ್ತಮ ಗುಣಗಳ ಬಗ್ಗೆ ಹೊಗಳಿದ್ದಾರೆ. ಈ ಬಗ್ಗೆ ನೆಟ್ಟಿಗರ ನಡುವೆ ನಾನಾ ರೀತಿಯಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಅಸಲಿ ವಿಷಯ ಬೇರೆಯದ್ದೇ ಇದೆ.

ಈ ಡಾಕ್ಯುಮೆಂಟರಿ ಅಥವಾ ಸಾಕ್ಷ್ಯ ಚಿತ್ರದ ಹೆಸರು 'ದಿ ಪೋಪ್ ಆನ್ಸರ್ಸ್​' ಎಂದು. ಈ ಸಾಕ್ಷ್ಯಚಿತ್ರವು ಪೋಪ್ ಫ್ರಾನ್ಸಿಸ್ ಅವರನ್ನು ಒಳಗೊಂಡಿದ್ದು ಇದು ಸ್ಪ್ಯಾನಿಷ್ ಭಾಷೆಯಲ್ಲಿದೆ. ಈ ಸಾಕ್ಷ್ಯಚಿತ್ರದಲ್ಲಿ ಕಳೆದ ವರ್ಷ ರೋಮ್‌ನಲ್ಲಿ ಪೋಪ್​, 20ರ ಹರೆಯದ 10 ಜನರೊಂದಿಗೆ ನಡೆಸಿದ ಸಭೆಯನ್ನು ಕ್ಯಾಮರಾ ಕಣ್ಣಲ್ಲಿ ಸೆರೆಹಿಡಿಯಲಾಗಿದೆ.

ಸಾಕ್ಷ್ಯಚಿತ್ರದಲ್ಲಿ 'ಮನುಷ್ಯನಿಗೆ ದೇವರು ನೀಡಿದ ಸುಂದರವಾದ ವಸ್ತುಗಳಲ್ಲಿ ದೈಹಿಕ ಸಂಬಂಧವೂ ಒಂದು" ಎಂದು ಅವರು ಹೇಳಿದರು. ಹಸ್ತಮೈಥುನವನ್ನು ಉಲ್ಲೇಖಿಸುತ್ತಾ ಫೋಪ್​ ನಿಮ್ಮನ್ನು ಲೈಂಗಿಕವಾಗಿ ವ್ಯಕ್ತಪಡಿಸುವುದು ಒಂದು ರೀತಿಯ ಶ್ರೀಮಂತಿಕೆ. ಆದ್ದರಿಂದ ನಿಜವಾದ ಲೈಂಗಿಕ ಅಭಿವ್ಯಕ್ತಿಯಿಂದ ದೂರವಿರುವುದು ನಿಮ್ಮನ್ನು ಕುಂಠಿತಗೊಳಿಸಿ ಈ ಶ್ರೀಮಂತಿಕೆಯನ್ನು ಕ್ಷೀಣಿಸುತ್ತದೆ" ಎಂದು ಅವರು ಹೇಳಿದರು.

ಯುವಕ ಹಾಗೂ ಯುವತಿಯರು ಪೋಪ್‌ಗೆ ಹಲವಾರು ಜಿಜ್ಞಾಸೆಗಳು, ಲೈಂಗಿಕತೆಗೆ ಸಂಬಂಧಿಸಿದ ಕಠಿಣ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಅವರು ಸ್ವಯಂಪ್ರೇರಿತವಾಗಿ ಪ್ರತಿಕ್ರಿಯಿಸಿದ್ದಾರೆ. ಅವರಿಗೆ "ಬೈನರಿ-ಅಲ್ಲದ ವ್ಯಕ್ತಿ" ಎಂದರೇನು ಎನ್ನುವ ಬಗ್ಗೆ ತಿಳಿದಿದೆಯೆ ಎಂದು ಕೇಳಲಾಯಿತು. ಅಷ್ಟೇ ಅಲ್ಲದೇ ಅವರಲ್ಲಿ ಟಿಂಡರ್ ಎಂದರೇನು ಮತ್ತು ಇನ್ನೂ ಹೆಚ್ಚಿನ ಪ್ರಶ್ನೆಗಳನ್ನು ಕೇಳಿದರು. ಬೈನರಿ ಅಲ್ಲದ ವ್ಯಕ್ತಿಯ ಪ್ರಶ್ನೆಗೆ, ಪೋಪ್ ಸಕಾರಾತ್ಮಕವಾಗಿ ಉತ್ತರಿಸಿದ್ದು LGBT ಜನರನ್ನು ಕ್ಯಾಥೋಲಿಕ್ ಚರ್ಚ್ ಸ್ವಾಗತಿಸಬೇಕೆಂದು ಪುನರುಚ್ಚರಿಸಿದರು.

ಅವರು "ಎಲ್ಲರೂ ದೇವರ ಮಕ್ಕಳು. ದೇವರು ಯಾರನ್ನೂ ತಿರಸ್ಕರಿಸುವುದಿಲ್ಲ. ದೇವರು ತಂದೆ. ಮತ್ತು ಚರ್ಚಿಂದ ಯಾರನ್ನೂ ಹೊರಹಾಕಲು ನನಗೆ ಹಕ್ಕಿಲ್ಲ" ಎಂದು ತೃತೀಯ ಲಿಂಗಿಗಳ ಹಾಗೂ ಸಲಿಂಗಕಾಮಿಗಳ ಬಗ್ಗೆ ಹೇಳಿದ್ದಾರೆ.

ರೋಮನ್ ಕ್ಯಾಥೋಲಿಕ್ ಚರ್ಚ್ ಸತತವಾಗಿ ಗರ್ಭಪಾತವನ್ನು ಖಂಡಿಸಿದ್ದು ಗರ್ಭಪಾತದ ಬಗ್ಗೆ ಮಾತನಾಡಿದ ಪೋಪ್ ಅವರ ಟೀಕೆಗಳನ್ನು ಅಧಿಕೃತ ವ್ಯಾಟಿಕನ್ ವೃತ್ತಪತ್ರಿಕೆ LOsservatore Romano ಪ್ರಕಟಿಸಿದೆ. ಗರ್ಭಪಾತವು ಹುಟ್ಟಲಿರುವ ಮಗುವಿನ ಜೀವನವನ್ನು ನೇರವಾಗಿ ಮತ್ತು ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳುತ್ತದೆ ಎಂದು ಅದು ಹೇಳುತ್ತದೆ.

ಗರ್ಭಪಾತದ ಕುರಿತು, ಪೋಪ್ "ಗರ್ಭಾವಸ್ಥೆಯನ್ನು ಕೊನೆಗೊಳಿಸಿದ ಮಹಿಳೆಯರ ಬಗ್ಗೆ ಧರ್ಮಗುರುಗಳು ಕರುಣೆಯಿಂದ ಇರಬೇಕು ಎಂದು ಹೇಳಿದರು. ಆದರೆ ಅಭ್ಯಾಸವು ಸ್ವೀಕಾರಾರ್ಹವಲ್ಲ" ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net