ಎಕ್ಸ್​ಪ್ರೆಸ್​ವೇನಲ್ಲಿ ಪವರ್ ಪಂಚ್; ಯುದ್ಧಕಾಲ ಸೇರಿ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಅನುಕೂಲ

asdasas
Published on
ಚೀನಾ, ಪಾಕಿಸ್ತಾನದಿಂದ ಭದ್ರತಾ ಬೆದರಿಕೆಯನ್ನು ಎದುರಿಸುತ್ತಿರುವ ಭಾರತ, ರಕ್ಷಣಾ ಕ್ಷೇತ್ರದಲ್ಲಿ ಸಬಲವಾಗಿರಲು ಅಗತ್ಯವಾದ ಸಿದ್ಧತೆಮಾಡಿಕೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ ದೇಶದ ರಸ್ತೆ ಸಾರಿಗೆ ಮೂಲ ಸೌಕರ್ಯಕ್ಕೆ ಬಲತುಂಬುವ ಉತ್ತರ ಪ್ರದೇಶದ ಪೂರ್ವಾಂಚಲ ಎಕ್ಸ್​ಪ್ರೆಸ್​ವೇ ಮಂಗಳವಾರ ಲೋಕಾರ್ಪಣೆಗೊಂಡಿದೆ. ಯುದ್ಧಕಾಲ ಸೇರಿ ತುರ್ತು ಪರಿಸ್ಥಿತಿಯಲ್ಲಿ ಬಳಕೆಗೆ ಅನುಕೂಲವಾಗುವಂತೆ ನಿರ್ವಣವಾಗಿರುವ ಈ ಎಕ್ಸ್​ಪ್ರೆಸ್​ವೇ ಹಲವು ವಿಶೇಷತೆಗಳನ್ನು ಹೊಂದಿದೆ.

ಉತ್ತರ ಪ್ರದೇಶದ ಸುಲ್ತಾನಪುರ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 341 ಕಿಲೋಮೀಟರ್ ಉದ್ದದ ಪೂರ್ವಾಂಚಲ ಎಕ್ಸ್​ಪ್ರೆಸ್​ವೇಯನ್ನು ಮಂಗಳವಾರ ಲೋಕಾರ್ಪಣೆ ಮಾಡಿದರು. ಈ ಕಾರ್ಯಕ್ರಮಕ್ಕೆ ಅವರು ಆಗಮಿಸಿದ ಭಾರತೀಯ ವಾಯುಪಡೆಯ ಬೃಹತ್ ಸಿ-130ಜೆ ಸೂಪರ್ ಹರ್ಕ್ಯುಲಸ್ ಸಾರಿಗೆ ವಿಮಾನ ಇದೇ ಎಕ್ಸ್​ಪ್ರೆಸ್​ವೇನಲ್ಲಿ ಇಳಿದು ಗಮನಸೆಳೆಯಿತು. ಎಕ್ಸ್​ಪ್ರೆಸ್​ವೇನಲ್ಲಿರುವ 3.2 ಕಿ.ಮೀ. ಏರ್​ಸ್ಟ್ರಿಪ್​ನಲ್ಲಿ ಭಾರತೀಯ ವಾಯುಪಡೆಯ ವಿವಿಧ ಯುದ್ಧವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್​ಗಳ ಕವಾಯತನ್ನು ಕೂಡ ಪ್ರಧಾನಿ ವೀಕ್ಷಿಸಿದರು. ತುರ್ತು ಸಂದರ್ಭಗಳಲ್ಲಿ ಯುದ್ಧವಿಮಾನಗಳನ್ನು ಇಳಿಸುವುದಕ್ಕೆ ಬೇಕಾದ ರೀತಿಯಲ್ಲಿ ಎಕ್ಸ್​ಪ್ರೆಸ್​ವೇಯನ್ನು ನಿರ್ವಿುಸಲಾಗಿದೆ.

ಎಕ್ಸ್​ಪ್ರೆಸ್​ವೇಗಳ ಜಾಲ: ಪೂರ್ವಾಂಚಲ ಎಕ್ಸ್​ಪ್ರೆಸ್​ವೇಗೆ ಹೊರತಾಗಿ ಉತ್ತರಪ್ರದೇಶದಲ್ಲಿ ಎಕ್ಸ್​ಪ್ರೆಸ್​ವೇಗಳ ಜಾಲ ನಿರ್ವಣವಾಗುತ್ತಿದೆ. ಕನಿಷ್ಠ ಮೂರು ಎಕ್ಸ್ ಪ್ರೆಸ್​ವೇಗಳ ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೆ, ರಕ್ಷಣಾ ಕಾರಿಡಾರ್ ಪ್ರಸ್ತಾವನೆ ಚಾಲ್ತಿಯಲ್ಲಿದೆ. ಆಗ್ರಾ-ಲಖನೌ ಮತ್ತು ಯಮುನಾ ಎಕ್ಸ್​ಪ್ರೆಸ್​ವೇಗಳು ಈಗಾಗಲೇ ಚಾಲ್ತಿಯಲ್ಲಿದ್ದು, ವಿವಿಧ ಹಂತದ ಕಾಮಗಾರಿಗಳು ಪ್ರಗತಿಯಲ್ಲಿವೆ.

ಶೀಘ್ರ ಗಂಗಾ ಎಕ್ಸ್​ಪ್ರೆಸ್​ವೇ:

ಉತ್ತರ ಪ್ರದೇಶದ ಪೂರ್ವ ಮತ್ತು ಪಶ್ಚಿಮ ಪ್ರಾಂತ್ಯಗಳನ್ನು ಜೋಡಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. ಶೀಘ್ರವೇ ಗಂಗಾ ಎಕ್ಸ್​ಪ್ರೆಸ್​ವೇ ಶುರುವಾಗಲಿದೆ. ಗೋರಖಪುರ ಮತ್ತು ಬಲಿಯಾ ಲಿಂಕ್ ಎಕ್ಸ್​ಪ್ರೆಸ್​ವೇ ಕಾಮಗಾರಿಗಳು ಕೆಲವೇ ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ. ಪ್ರಧಾನಿ ಮೋದಿಯವರ ಮುನ್ನೋಟದಂತೆ ಜಗತ್ತಿನ ಅತಿದೊಡ್ಡ ಆರ್ಥಿಕತೆಯಾಗಿ ಭಾರತವನ್ನು ಬೆಳೆಸುವಲ್ಲಿ ಉತ್ತರ ಪ್ರದೇಶ ಬೆನ್ನೆಲುಬಾಗಿ ನಿಲ್ಲಲಿದೆ. | ಯೋಗಿ ಆದಿತ್ಯನಾಥ ಉತ್ತರ ಪ್ರದೇಶ ಮುಖ್ಯಮಂತ್ರಿ

ಪ್ರಧಾನಿ ಭಾಷಣದ ಮುಖ್ಯಾಂಶ

  • ಮೂರು ವರ್ಷದ ಹಿಂದೆ ಈ ಎಕ್ಸ್​ಪ್ರೆಸ್​ವೇ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲು ಆಗಮಿಸಿದ್ದ ವೇಳೆ, ನಾನು ಈ ರಸ್ತೆಯಲ್ಲಿ ವಿಮಾನದ ಮೇಲೆ ಬಂದಿಳಿಯಲಿದ್ದೇನೆ ಎಂದು ಊಹಿಸಿಯೂ ಇರಲಿಲ್ಲ. ಅತ್ಯಂತ ಕಡಿಮೆ ಅವಧಿಯಲ್ಲಿ ಇದು ಸಾಕಾರವಾಗಿದೆ.
  • ಉತ್ತರ ಪ್ರದೇಶ ಮತ್ತು ಇಲ್ಲಿನ ಜನರ ಸಾಮರ್ಥ್ಯದ ಬಗ್ಗೆ ಯಾರಿಗಾದರೂ ಸಂದೇಹ ಇದ್ದರೆ ಅಂಥವರು ಈ ದಿನ ಸುಲ್ತಾನಪುರಕ್ಕೆ ಬರಬೇಕಾಗಿತ್ತು. ಬಂದು ಈ ರಾಜ್ಯದ ಶಕ್ತಿ, ಸಾಮರ್ಥ್ಯಗಳನ್ನು ಕಣ್ತುಂಬಿಕೊಳ್ಳಬೇಕಾಗಿತ್ತು. ಇಂತಹ ಆಧುನಿಕ ಎಕ್ಸ್​ಪ್ರೆಸ್​ವೇ ಕೇವಲ ಮೂರು ವರ್ಷದಲ್ಲಿ ನಿರ್ವಣವಾಗಿದೆ.
  • ನಾನು ಉತ್ತರ ಪ್ರದೇಶಕ್ಕೆ ಬಂದಾಗೆಲ್ಲ ಈ ಹಿಂದಿನ ಸರ್ಕಾರದ ಪ್ರತಿನಿಧಿಗಳು ನನ್ನನ್ನು ಭೇಟಿ ಮಾಡಲು, ನನ್ನ ಪಕ್ಕ ನಿಂತುಕೊಳ್ಳಲು ಹೆದರಿಕೊಳ್ಳುತ್ತಿದ್ದರು. ವೋಟ್ ಬ್ಯಾಂಕ್ ಕಳೆದುಕೊಳ್ಳುವ ಭೀತಿಯನ್ನು ಅವರು ಎದುರಿಸುತ್ತಿದ್ದರು.
  • ಹಿಂದಿನ ಸರ್ಕಾರಗಳು ಪೂರ್ವ ಉತ್ತರ ಪ್ರದೇಶವನ್ನು ‘ಮಾಫಿಯಾ’ಗಳ ವಶಕ್ಕೊಪ್ಪಿಸಿ ಬಡತನಕ್ಕೆ ತಳ್ಳಿದ್ದವು. ಬಿಜೆಪಿ ಸರ್ಕಾರ ಈಗ ಈ ಭಾಗದಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ಬರೆಯುತ್ತಿದೆ.
  • ಲಖನೌನ ಪ್ರತಿ ಸಣ್ಣ ಹಳ್ಳಿಯನ್ನೂ ಈ ಎಕ್ಸ್​ಪ್ರೆಸ್​ವೇ ಸಂರ್ಪಸಲಿದೆ. ಕೈಗಾರಿಕಾ ಕಾರಿಡಾರ್​ನ ಕೆಲಸಕ್ಕೆ ವೇಗಸಿಗಲಿದೆ. ಉತ್ತರ ಪ್ರದೇಶದಲ್ಲಿ ಇನ್ನಷ್ಟು ಎಕ್ಸ್​ಪ್ರೆಸ್​ವೇಗಳು ಬರಲಿವೆ.

ಎಕ್ಸ್​ಪ್ರೆಸ್​ವೇ ವೈಶಿಷ್ಟ್ಯಗಳು

  • ರಾಷ್ಟ್ರ ರಾಜಧಾನಿ ದೆಹಲಿಯಿಂದ ಬಿಹಾರದ ಗಡಿಯ ಉತ್ತರಪ್ರದೇಶದ ಪೂರ್ವ ಮೂಲೆಗೆ ಕೇವಲ 10 ಗಂಟೆಯಲ್ಲಿ ತಲುಪುವುದಕ್ಕೆ ಈ ಎಕ್ಸ್​ಪ್ರೆಸ್​ವೇ ನೆರವಾಗಲಿದೆ.
  • ಇದು ಆರು ಪಥಗಳ ಎಕ್ಸ್​ಪ್ರೆಸ್​ವೇ ಆಗಿದ್ದು, ಭವಿಷ್ಯದಲ್ಲಿ ಎಂಟು ಪಥಗಳಿಗೆ ವಿಸ್ತರಿಸಲು ಅವಕಾಶವಿದೆ.
  • ಲಖನೌನ ಚಾಂದ್​ಸರಾಯ್ ಗ್ರಾಮದಿಂದ ಆರಂಭವಾಗುವ ಈ ಎಕ್ಸ್​ಪ್ರೆಸ್​ವೇ ಉತ್ತರ ಪ್ರದೇಶ- ಬಿಹಾರ ಗಡಿಯಿಂದ 18 ಕಿ.ಮೀ. ಅಂತರದಲ್ಲಿರುವ ಗಾಝಿಪುರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 31ರಲ್ಲಿರುವ ಹೈದರಿಯಾ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ.
  • 22,500 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಎಕ್ಸ್​ಪ್ರೆಸ್​ವೇಯನ್ನು ನಿರ್ವಣಮಾಡಲಾಗಿದೆ.
  • ಉತ್ತರ ಪ್ರದೇಶದ ಪೂರ್ವ ಭಾಗ ವಿಶೇಷವಾಗಿ ಲಖನೌ, ಬಾರಾಬಂಕಿ, ಅಮೇಠಿ, ಅಯೋಧ್ಯೆ, ಸುಲ್ತಾನಪುರ, ಅಂಬೇಡ್ಕರ್ ನಗರ, ಆಜಂಗಢ, ಮಾವು ಮತ್ತು ಗಾಝಿಪುರದ ಅರ್ಥವ್ಯವಸ್ಥೆಗೆ ಇದು ಬಲ ತುಂಬಲಿದೆ.

ಸಿಎಜಿ ಸರ್ಕಾರ ಸ್ಥಿತಿ ಈಗಿಲ್ಲ, ಚೊಚ್ಚಲ ಲೆಕ್ಕಪರಿಶೋಧನಾ ದಿನ ಆಚರಣೆ

ಲೆಕ್ಕಪರಿಶೋಧನೆ ಎಂಬುದು ಇಂದು ಮೌಲ್ಯವರ್ಧನೆಯ ಒಂದು ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಸಿಎಜಿ ವರ್ಸಸ್ ಸರ್ಕಾರ ಎಂಬ ಮನಸ್ಥಿತಿ ಬದಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು. ಅವರು ದೇಶದ ಚೊಚ್ಚಲ ‘ಆಡಿಟ್ ದಿವಸ್’(ಲೆಕ್ಕಪರಿಶೋಧನೆ ದಿನ) ಕಾರ್ಯಕ್ರಮ ಮತ್ತು ಸರ್ದಾರ್ ಪಟೇಲ್ ಅವರ ಪ್ರತಿಮೆ ಅನಾವರಣ ಮಾಡಿ ಮಾತನಾಡಿದರು. ಹಿಂದಿನ ಸರ್ಕಾರಗಳ ಸತ್ಯವನ್ನು ನಾವು ಪ್ರಾಮಾಣಿಕವಾಗಿ ದೇಶದ ಜನರ ಮುಂದೆ ಇರಿಸಿದ್ದೇವೆ. ಸಮಸ್ಯೆಗಳನ್ನು ಗುರುತಿಸಿದಾಗ ಮಾತ್ರವೇ ಅದಕ್ಕೆ ಪರಿಹಾರ ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಸಂಪರ್ಕರಹಿತ ಕಸ್ಟಮ್್ಸ, ಆಟೋಮ್ಯಾಟಿಕ್ ರಿನೀವಲ್ಸ್, ಫೇಸ್​ಲೆಸ್ ಅಸೆಸ್​ವೆುಂಟ್ಸ್, ಸೇವಾ ಪೂರೈಕೆಗೆ ಆನ್​ಲೈನ್ ಅರ್ಜಿ ಸಲ್ಲಿಕೆ ಮುಂತಾದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಎಲ್ಲ ಸುಧಾರಣಾ ಕ್ರಮಗಳ ಕಾರಣ ಸರ್ಕಾರದ ಅನಪೇಕ್ಷಿತ ಹಸ್ತಕ್ಷೇಪಗಳು ಕೊನೆಯಾಗಿವೆ ಎಂದರು. ಸಿಎಜಿ ಗಿರೀಶ್​ಚಂದ್ರ ಮುಮು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net