ಪರಶುರಾಮನ ಪ್ರತಿಮೆಯಲ್ಲಿ ಕಳಪೆ ಕಾಮಗಾರಿ :ತೀರ್ಪು ಕಾಯ್ದಿರಿಸಿದ ಹೈಕೋರ್ಟ್

highcourt
Published on

ಬೆಂಗಳೂರು:  ಜನರ ಹಣದ ಜತೆ ಆಟವಾಡಲಾಗದು. ಪ್ರತಿಮೆಗೆ ಕಂಚು ಬಳಸುವ ಬದಲು ಹಿತ್ತಾಳೆ ಮತ್ತು ಸತುವನ್ನೇಕೆ ಬಳಸಲಾಗಿದೆ? ಪ್ರತಿಮೆ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಹಣವನ್ನು ಈ ರೀತಿ ಲೂಟಿ ಮಾಡಲಾಗಿದೆ ಪ್ರಕರಣವೊಂದರ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಪರಿಯಿದು.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಉಮಿಕಲ್ ಬೆಟ್ಟದ ಮೇಲೆ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣ ಕಾಮಗಾರಿಯಲ್ಲು ಅಕ್ರಮ ಎಸಗಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್, ಅರ್ಜಿದಾರರ ಪರ ವಕೀಲರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಪ್ರಕರಣ ಸಂಬಂಧ ನಗರದ ಸರ್ ಎಂ.ವಿಶ್ವೇಶ್ವರಯ್ಯ ಲೇಔಟ್ ನಿವಾಸಿಯಾಗಿರುವ ಕಲಾವಿದ ಕೃಷ್ಣ ನಾಯಕ್ ಅವರು ತಮ್ಮ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನುಪೂರ್ಣಗೊಳಿಸಿರುವ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ಆದೇಶ ಕಾಯ್ದಿರಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ. ಅರುಣ್ ಶ್ಯಾಮ್ ವಾದ ಮಂಡಿಸಿ ಪರಶುರಾಮ ಪ್ರತಿಮೆ ತಲೆಯ ಭಾಗ ಭಾರ ತಾಳಲಾರದ್ದರಿಂದ ಅದರ ಜೋಡಣೆ ಬದಲಿಸಲಾಗಿದೆ. ಕಂಚಿನಲ್ಲಿ ಪ್ರತಿಮೆ ನಿರ್ಮಿಸಬೇಕು ಎಂದು ಹೇಳಿದ್ದು, ನಾವು ತಾಮ್ರ, ಸತು ಮತ್ತು ಹಿತ್ತಾಳೆಯನ್ನು ಬಳಕೆ ಮಾಡಿದ್ದೇವೆ. ಸತು ಮತ್ತು ಹಿತ್ತಾಳೆಯು ಕಂಚಿಗೆ ಸಮನಾಗುತ್ತದೆ ಎಂದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎನ್ ಜಗದೀಶ್ ಅವರು ಸುರತ್ಕಲ್‌ನಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿ) ನೀಡಿರುವ ವರದಿಯ ಪ್ರಕಾರ ಅರ್ಜಿದಾರರು ಪರಶುರಾಮ ಪ್ರತಿಮೆಗೆ ಕಂಚು ಬಳಸಿಲ್ಲ. ಶೇ. 80ರಷ್ಟು ಹಿತ್ತಾಳೆ ಮತ್ತು ಶೇ.20ರಷ್ಟು ಸತು ಬಳಕೆ ಮಾಡಿದ್ದಾರೆ ಎಂದು ವರದಿ ನೀಡಿದೆ. ಆದರೆ, ನಿರ್ಮಿತಿ ಕೇಂದ್ರ ಮತ್ತು ಅರ್ಜಿದಾರರು ಕಂಚು ಬಳಕೆ ಮಾಡಿದೆ ಎಂದು ಹೇಳಿದೆ. ನಿರ್ಮಿತಿ ಕೇಂದ್ರ ಹೇಳುತ್ತಿರುವುದನ್ನು ನೋಡಿದರೆ ಇನ್ನಷ್ಟು ತನಿಖೆಯಾಗಬೇಕಿದೆ. ಜಿಲ್ಲಾಧಿಕಾರಿ ಪ್ರತಿಮೆ ತೆರವು ಮಾಡಿ ಎಂದು ಆದೇಶ ಮಾಡಿದ್ದಾರೆ. ಈ ಆದೇಶವನ್ನು ನಿರ್ಮಿತಿ ಕೇಂದ್ರವು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ತನಿಖೆ ಪ್ರಗತಿಯಲ್ಲಿರುವುದರಿಂದ ತೆರವು ಮಾಡುವಂತೆ ಆದೇಶಿಸಿದ್ದನ್ನು ತಡೆಯಿರಿ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ತನಿಖೆ ನಡೆಯಲಿ, ಅರ್ಜಿದಾರರಿಗೂ ಹಣ ತಲುಪಿದೆಯೋ ಗೊತ್ತಿಲ್ಲ. ಅವರ ಪಾತ್ರವೂ ಬಹಿರಂಗವಾಗಬೇಕಿದೆ. ಇದರಲ್ಲಿ ನಿಜವಾದ ಅಪರಾಧಿ ಯಾರು ಎಂಬುದು ತಿಳಿಯಬೇಕಿದೆ ಎಂದರು.

ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ ಕಳಪೆ ಕಾಮಗಾರಿ ನಡೆಸಲಾಗಿದೆ ಎಂದು ಖಚಿತವಾಗಿ ಹೇಳಿದ ಪೀಠವು ನಿಮಗೆ (ಅರ್ಜಿದಾರರಿಗೆ) ಕೊಟ್ಟಿರುವುದು ಯಾರ ದುಡ್ಡು? ನಿಮಗೆ ನೀಡಿರುವ ಹಣ ನಿರ್ಮಿತಿ ಕೇಂದ್ರ ಅಥವಾ ದೂರುದಾರರಿಗೆ ಸೇರಿದ್ದಲ್ಲ. ಅದು ಜನರ ಹಣ. ನೀವು ಜನರ ಹಣದ ಜತೆ ಆಟವಾಡಲಾಗದು. ಪ್ರತಿಮೆಗೆ ಕಂಚು ಬಳಸುವ ಬದಲು ಹಿತ್ತಾಳೆ ಮತ್ತು ಸತುವನ್ನೇಕೆ ಬಳಸಲಾಗಿದೆ? ಪ್ರತಿಮೆ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿ ಸಾರ್ವಜನಿಕರ ಹಣವನ್ನು ಲೂಟಿ ಮಾಡಲಾಗಿದೆ. 1.83 ಕೋಟಿ ರೂಪಾಯಿ ಪೈಕಿ ಈಗಾಗಲೇ ನಿಮಗೆ 1.20 ಕೋಟಿ ರೂಪಾಯಿ ಪಾವತಿಯಾಗಿದೆ. ಇದು ಸಾರ್ವಜನಿಕರ ಹಣ. ಎಲ್ಲವೂ ದಾಖಲೆಯಲ್ಲಿರುವುದರಿಂದ ಯಾವುದೇ ಸೂಚನೆ ಪಡೆಯುವ ಅಗತ್ಯವೇ ಇಲ್ಲ. ಜನರ ಹಣದ ಜತೆ ಆಟ ಆಡುವವರನ್ನು ಬಿಡಲಾಗದು. ಪುಣ್ಯಕ್ಕೆ ಪ್ರತಿಮೆ ಮಾರನೇಯ ದಿನ ಕುಸಿದಿಲ್ಲ. ಅದು ಬೀಳುವ ಮುಂಚೆಯೇ ತೆರವು ಮಾಡಲಾಗಿದೆ ಎಂದು ಅರ್ಜಿದಾರರ ವಿರುದ್ಧ ಮೌಖಿಕವಾಗಿ ಕಿಡಿಕಾರಿತು.

35 ಅಡಿ ಎತ್ತರದ ಪ್ರತಿಮೆಯ ಭಾರವನ್ನು ಹಿತ್ತಾಳೆ ಮತ್ತು ಸತು ತಾಳುತ್ತದೆಯೇ? ಪ್ರತಿಮೆಗೆ ಕಂಚನ್ನೇ ಬಳಸಬೇಕು ಎಂದು ಹೇಳಿರುವುದಕ್ಕೆ ನಿಖರ ಕಾರಣವಿದೆ. ಹಿತ್ತಾಳೆ ಮತ್ತು ಸತು ಬಳಸಿ ಪ್ರತಿಮೆ ನಿರ್ಮಿಸಲು 1.20 ಕೋಟಿ ರೂಪಾಯಿ ಏಕೆ ಪಡೆದಿರಿ? ಕಂಚು ಬಳಕೆ ಮಾಡದಿರುವುದು ಕ್ರಿಮಿನಲ್ ಅಪರಾಧ. ನಿರ್ಮಿತಿ ಕೇಂದ್ರದ ಬಗ್ಗೆ ಚೆನ್ನಾಗಿ ತಿಳಿದಿದೆ. ಅದರ ಬಗ್ಗೆ ಕಡಿಮೆ ಮಾತನಾಡಿದಷ್ಟು ಒಳ್ಳೆಯದು ಎಂದು ಚಾಟಿ ಬೀಸಿತು.

ಉಡುಗೊರೆಯೇ ಅಥವಾ ಲಂಚವೇ?

ದೂರುದಾರ ಕೃಷ್ಣಯ್ಯ ಶೆಟ್ಟಿ ಪರ ವಕೀಲರು ಎನ್‌ಐಟಿಕೆ ವರದಿಯೇ ಅಸಲಿಯದ್ದಲ್ಲ. ಇದು ಪ್ರತಿಮೆಯ ವಿಚಾರವಷ್ಟೇ ಅಲ್ಲ. ನಿರ್ಮಿತಿ ಕೇಂದ್ರದಿಂದ ಅರ್ಜಿದಾರರ ವೈಯಕ್ತಿಕ ಖಾತೆಗೆ ಹಣ ವರ್ಗಾವಣೆಯಾಗಿದೆ. ಕೆಲಸ ನೀಡುವುದಕ್ಕೆ ಮೊದಲೇ ಹಣ ವರ್ಗಾವಣೆಯಾಗಿದೆ. ಯಾವ ಆಧಾರದಲ್ಲಿ ಅದನ್ನು ವರ್ಗಾಯಿಸಲಾಗಿದೆ? 2019ರಲ್ಲಿ 1.34 ಕೋಟಿ ಹಣ ಬಿಡುಗಡೆ ಮಾಡಿದ ಬಳಿಕ ಕಾರ್ಯಾದೇಶ ನೀಡಲಾಗಿದೆ. 2022ರಲ್ಲಿ ಕಾರ್ಯಾದೇಶ ನೀಡಲಾಗಿದೆ. ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ವೈಯಕ್ತಿಕ ಖಾತೆಗೆ ಅರ್ಜಿದಾರರು 2.27 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾರೆ. ಇದು ಉಡುಗೊರೆಯೇ ಅಥವಾ ಲಂಚವೇ? ಅರ್ಜಿದಾರರ ಜಿಎಸ್‌ಟಿ ಖಾತೆಯನ್ನು ಸಂಬಂಧಿತ ಪ್ರಾಧಿಕಾರವು ಸ್ವಯಂಪ್ರೇರಿತವಾಗಿ ಅಮಾನತುಗೊಳಿಸಿದೆ. ಹೀಗಾಗಿ, ಅವರು ಕೆಲಸ ಮಾಡಲಾಗದು ಎಂದು ದಾಖಲೆ ಸಹಿತ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net