ಕಳಪೆ ಶೇಂಗಾ ಬೀಜ ವಿತರಣೆ ಆರೋಪ; ರೈತರಿಂದ ಗೋದಾಮಿಗೆ ಮುತ್ತಿಗೆ ಹಾಕಿ ಪ್ರತಿಭಟನೆ

27-RNR-01
Published on

ರಾಣೆಬೆನ್ನೂರ: ನಗರದ ಎಪಿಎಂಸಿ ಆವರಣದ ಗೋದಾಮಿನಲ್ಲಿ ವ್ಯಾಪಾರಸ್ಥರು ಕಳಪೆ ಶೇಂಗಾ ಬೀಜ ವಿತರಣೆ ಮಾಡಿದ್ದಾರೆ ಎಂದು ಆರೋಪಿಸಿ ತಾಲೂಕಿನ ಹುಣಸಿಕಟ್ಟೆ ಗ್ರಾಮದ ರೈತರು ಗುರುವಾರ ಗೋದಾಮಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಎಪಿಎಂಸಿ ಆವರಣದಲ್ಲಿ ಗೋದಾಮು ಮಾಡಿಕೊಂಡಿರುವ ಪ್ರಕಾಶ, ಸದಾಶಿವ ಹಾಗೂ ವಿನಾಯಕ ಎಂಬುವರು ಗ್ರಾಮದ ಹಲವು ರೈತರಿಗೆ ಶೇಂಗಾ ಬೀಜ ಮಾರಾಟ ಮಾಡಿದ್ದಾರೆ. ಆದರೆ, ಬಿತ್ತನೆ ಮಾಡಿ ತಿಂಗಳು ಕಳೆಯುತ್ತ ಬಂದರೂ ಬೀಜ ಮಾತ್ರ ಇಂದಿಗೂ ಮೊಳಕೆಯೊಡೆದಿಲ್ಲ.
ಗ್ರಾಮದ 25ಕ್ಕೂ ಅಧಿಕ ರೈತರು 5 ಕ್ವಿಂಟಾಲ್‌ಗೂ ಅಧಿಕ ಶೇಂಗಾ ಬೀಜ ಖರೀದಿ ಮಾಡಿದ್ದಾರೆ. ಈ ಬಗ್ಗೆ ಕೇಳಲು ಬಂದರೆ ನಾವು ನಿಮಗೆ ಬೀಗ ಮಾರಾಟ ಮಾಡಿಯೆ ಇಲ್ಲ ಎಂದು ವ್ಯಾಪಾರಸ್ಥರು ಜಾರಿಕೊಳ್ಳುತ್ತಿದ್ದಾರೆ. ಆದ್ದರಿಂದ ನಮಗೆ ನ್ಯಾಯ ಒದಗಿಸಿಕೊಡಬೇಕು. ಅಲ್ಲಿಯವರೆಗೆ ಗೋದಾಮಿನಲ್ಲಿಯೆ ಇರುತ್ತೇವೆ ಎಂದು ಪಟ್ಟುಹಿಡಿದರು.
ಸ್ಥಳಕ್ಕೆ ಬಂದ ಸಹಾಯಕ ಕೃಷಿ ನಿರ್ದೇಶಕಿ ಶಾಂತಮಣಿ ಜಿ. ಮಾತನಾಡಿ, ಗೋದಾಮಿನವರು ಬೀಜ ಮಾರಾಟ ಮಾಡಿದ ಕುರಿತು ಪರಿಶೀಲಿಸಲಾಗುವುದು. ಅಗತ್ಯ ದಾಖಲಾತಿ ಪರಿಶೀಲನೆ ಬಳಿಕ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂತೆಗೆದುಕೊಂಡರು.
ಪ್ರಮುಖರಾದ ಲೋಕೇಶ ಸುತಾರ, ಮಲ್ಲೇಶಪ್ಪ, ಸುರೇಶಪ್ಪ ಹೊನ್ನಪ್ಪಳವರ, ಕುಬೇರಪ್ಪ ಐರಣಿ, ಬೀರಪ್ಪ, ಹರೀಶ ಐರಣಿ, ಮುಕನೇಪ್ಪ ಬಣಕಾರ, ನಿಂಗಪ್ಪ ಹುಚ್ಚಿಕಟಗಿ, ಪ್ರಭುದೇವ ಗೌಡ್ರ, ನಾಗರಾಜ ಹುಚ್ಚಕರಕಿ, ಮಾಲತೇಶ, ಕರಬಸಮ್ಮ ಐರಣಿ, ಮಂಜುಳಾ ಪೂಜಾರ ಮತ್ತಿತರರು ಪ್ರತಿಭಟನೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net