ಕಾಶಿ ಯಾತ್ರೆ ಪ್ರಯಾಣಿಕರಿಗೆ ಕಳಪೆ ಆಹಾರ ವಿತರಣೆ: ಫಂಗಸ್ ಹಿಡಿದ ಚಪಾತಿ ಸರಬರಾಜು

Food
Published on

ಬೆಂಗಳೂರು: ‘ಕರ್ನಾಟಕ-ಭಾರತ್ ಗೌರವ್ ಕಾಶಿ ರೈಲು ಯಾತ್ರೆ’ ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದರೂ ಕಳಪೆ ಆಹಾರ ವಿತರಣೆ ಬಗ್ಗೆ ಯಾತ್ರಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫೆ.21ರಂದು ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗರಾಜ್‌ಗೆ ತೆರಳಿದ್ದ ಟ್ರಿಪ್‌ನಲ್ಲಿ ಪ್ರಯಾಣಿಸುತ್ತಿದ್ದ ಭಕ್ತಾಧಿಗಳಿಗೆ ಫಂಗಸ್ ಹೊಂದಿರುವ ಚಪಾತಿ ವಿತರಿಸಲಾಗಿದೆ. ರೈಲುನಲ್ಲಿ ಪ್ರಯಾಣಿಸುವ ಭಕ್ತಾಧಿಗಳಿಗೆ ಬೆಳಗ್ಗೆ ಉಪ್ಪಿಟ್ಟು, ಮಧ್ಯಾಹ್ನ ಚಪಾತಿ ಪಲ್ಯ,ಅನ್ನ ಸಾಂಬರು ಮತ್ತು ಮಜ್ಜಿಗೆ, ರಾತ್ರಿ ವೇಳೆ ಪಲಾವ್ ಅಥವಾ ಗೀ ರೈಸ್ ನೀಡಲಾಗುತ್ತಿದೆ. ಇದರ ಜತೆಗೆ ಕಾಫಿ ಅಥವಾ ಟೀ ನೀಡಲಾಗುತ್ತದೆ. ಆದರೆ,ಆಹಾರ ವಿತರಣೆಗೆ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯು,ಕಳಪೆ ಆಹಾರ ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ. ವಿಧಿಯಿಲ್ಲದೆ ಭಕ್ತಾಧಿಗಳು ಇದನ್ನೇ ಸೇವಿಸುವಂತಾಗಿದೆ. ಈ ಬಗ್ಗೆ ಭಕ್ತರು ರೈಲ್ವೆ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಬಳಿಕ, ಭಕ್ತಾರಿಗೆ ರೈಲು ಇಲಾಖೆ ಅಧಿಕಾರಿ, ಕ್ಷಮಾರ್ಪಣೆ ಪತ್ರ ಬರೆದು ಮುಂದೆ ಹೀಗಾಗದಂತೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದಾರೆ. ಕೆಲವರು ಮಾಡುವ ತಪ್ಪುಗಳಿಂದ ಮಹತ್ವಾಕಾಂಕ್ಷಿ ಯೋಜನೆಗೆ ಕೆಟ್ಟು ಹೆಸರು ಬರುವಂತಾಗಿದೆ. ಕಳಪೆ ಆಹಾರ ವಿತರಿಸಿರುವ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಯಾತ್ರಾರ್ಥಿಗಳ ಒತ್ತಾಯವಾಗಿದೆ.

ಜೀವನದಲ್ಲಿ ಒಮ್ಮೆ ಕಾಶಿ ಯಾತ್ರೆ ಕೈಗೊಳ್ಳಬೇಕೆಂದು ಕೋಟ್ಯಂತರ ಜನರಿಗೆ ಮನದಾಳವಾಗಿದೆ. ಇದನ್ನು ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆ ಸಹಯೋಗದಲ್ಲಿ ಮುಜರಾಯಿ ಇಲಾಖೆ ಕಡಿಮೆ ವೆಚ್ಚದಲ್ಲಿ ಕಾಶಿಯಾತ್ರೆ ಯೋಜನೆಯನ್ನು ಜಾರಿಗೆ ತಂದಿದೆ. ಇಲಾಖೆ ಈಗಾಗಲೇ ಒಂದು ಕೋಟಿ ರೂ.ಬ್ಯಾಂಕ್ ಗ್ಯಾರಂಟಿ ನೀಡಿ ರೈಲುನ್ನು ಬಾಡಿಗೆ ಪಡೆದಿದೆ. ಕಾಶಿ ಯಾತ್ರೆ ಕೈಗೊಳ್ಳುವ ಓರ್ವ ಯಾತ್ರಿಗೆ 20 ಸಾವಿರ ರೂ. ನಿಗದಿಪಡಿಸಲಾಗಿದೆ. ಇದರಲ್ಲಿ 15 ಸಾವಿರ ರೂ. ಯಾತ್ರಿ ಭರಿಸಿದರೆ ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಸಹಾಯಧನ ರೂಪದಲ್ಲಿ ನೀಡುತ್ತದೆ. 7 ದಿನಗಳ ಪ್ರವಾಸ ಕಾರ್ಯಕ್ರಮದಲ್ಲಿ ಕಾಶಿ, ಆಯೋಧ್ಯೆ ಮತ್ತು ಪ್ರಯಾಗರಾಜ್ ಸೇರಿ ಹಲವು ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಬಹುದು. ಇದರಿಂದ ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲವಾಗಿದೆ. ರೈಲುನಲ್ಲಿ ಪ್ರಯಾಣಿಸುವ ಯಾತ್ರಿಗಳಿಗೆ ಉಚಿತವಾಗಿ ಊಟ, ವಸತಿ ಇರಲಿದೆ. ಜತೆಗೆ, ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಲು ಉಚಿತ ವಾಹನ ವ್ಯವಸ್ಥೆಯೂ ಇದೆ. ಹಾಗಾಗಿ, ಕಡಿಮೆ ಖುರ್ಚಿನಲ್ಲಿ ಕಾಶಿ ನೋಡುವ ಸೌಭಾಗ್ಯ ಪ್ರಯಾಣಿಕರಿಗೆ ಸಿಗುವಂತಾಗಿದೆ.

ದೇಶದಲ್ಲೇ ಮೊದಲ ಸೇವೆ:

ಯೋಜನೆ ಅನುಷ್ಠಾನಕ್ಕೆ ಬಂದ ಹಿನ್ನೆಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಕಡಿಮೆ ಖರ್ಚಿನಲ್ಲಿ ಕಾಶಿ ಯಾತ್ರೆ ಸೇವೆ ನೀಡುವ ಹೆಗ್ಗಳಿಕೆ ಕರ್ನಾಟಕ ಪಾತ್ರವಾಗಿದೆ. ಬೆಂಗಳೂರು-ವಾರಣಾಸಿ-ಅಯೋಧ್ಯೆ - ಪ್ರಯಾಗರಾಜ್-ಮಾರ್ಗದಲ್ಲಿ ಚಲಿಸುವ ರೈಲು 7 ದಿನಗಳಲ್ಲಿ 4,161 ಕಿ.ಮೀ. ಕ್ರಮಿಸಲಿದೆ. 14 ಬೋಗಿ ಒಳಗೊಂಡಿರುವ ಈ ರೈಲಿನಲ್ಲಿ, 11 ಬೋಗಿ ಪ್ರಯಾಣಿಕರ ಪ್ರವಾಸಕ್ಕೆ ಮೀಸಲಿಡಲಾಗಿದೆ. ಥ್ರಿ ಟಯರ್ ಎಸಿ ವ್ಯವಸ್ಥೆ ಇದೆ.ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಭಜನೆಗೆ ಅವಕಾಶ ನೀಡಲಾಗಿದೆ. ದೇವಸ್ಥಾನಗಳನ್ನು ಬ್ರಾಂಡಿಂಗ್‌ಗಾಗಿ 11 ಬೋಗಿಗಳ ಮೇಲೆ ರಾಜ್ಯದ ಪ್ರಮುಖ ದೇವಸ್ಥಾನಗಳ ಮಾಹಿತಿ ಅಳವಡಿಸಲಾಗಿದೆ.

ತಿಂಗಳಿಗೆ ಎರಡು ಬಾರಿ ಪ್ರವಾಸ:

‘ಕರ್ನಾಟಕ-ಭಾರತ್ ಗೌರವ್ ಕಾಶಿ ರೈಲು ಬೆಂಗಳೂರು-ವಾರಣಾಸಿ-ಅಯೋಧ್ಯೆ- ಪ್ರಯಾಗರಾಜ್‌ಗೆ ಪ್ರತಿ ತಿಂಗಳು ಎರಡು ಬಾರಿ ಪ್ರಯಾಣಿಸಲಿದೆ. ಈಗಾಗಲೇ ಅಂದಾಜು 2 ಸಾವಿರ ಮಂದಿ ಕಾಶಿ ದರ್ಶನ ಮಾಡಿ ಬಂದಿದ್ದಾರೆ. ಒಮ್ಮೆ ರೈಲುನಲ್ಲಿ ಏಕಕಾಲದಲ್ಲಿ 600 ಯಾತ್ರಾರ್ಥಿಗಳು ಪ್ರಯಾಣಿಸಬಹುದು. ಮೊದಲ ಹಾಗೂ ಎರಡನೇ ಸುತ್ತಿನ ಪ್ರವಾಸದಲ್ಲಿ ಅಸನಗಳು ಪೂರ್ತಿ ಭರ್ತಿಯಾಗಿತ್ತು. ಆದರೆ, ಮೂರನೇ ಸುತ್ತಿನ ಪ್ರವಾಸದಲ್ಲಿ ಶೇ.25 ಸೀಟುಗಳು ಖಾಲಿ ಉಳಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net