ಕಾಂಗ್ರೆಸ್ ನೂತನ ಕಚೇರಿಯಲ್ಲಿ ಪೂಜೆ ಪುನಸ್ಕಾರ; ಲೋಕಕಲ್ಯಾಣದ ಸಾಲುಸಾಲು ಹೋಮ

Page 6- DKS
Published on

ಬೆಂಗಳೂರು: ಕೆಪಿಸಿಸಿ ಹೊಸ ಕಚೇರಿಯಲ್ಲಿ ಭಾನುವಾರ ಬೆಳಗ್ಗೆ 5 ಗಂಟೆಗೆ ಹೋಮ-ಹವನ ಮೂಲಕ ಧಾರ್ವಿುಕ ಕಾರ್ಯಕ್ರಮ ಆರಂಭವಾಗಿದ್ದು, ಎರಡು ದಿನ ಪೂಜೆ ನಡೆಯಲಿದೆ. ಮೊದಲ ದಿನ ಗಣಪತಿ ಹೋಮ, ವಾಸ್ತು ರಕ್ಷೋಜ್ಞ ಹೋಮ, ಭೂವರಹ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮ ನಡೆದು ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ನೆರವೇರಿತು.

ಲೋಕಲ್ಯಾಣಾರ್ಥ ನಡೆದ ಪೂಜೆಯಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ್, ಜಿ.ಪರಮೇಶ್ವರ್ ಮತ್ತಿತರ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಹೆಸರಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಕಲ್ಪ ಮಾಡಿದ್ದು ವಿಶೇಷವಾಗಿತ್ತು.

ಬಳಿಕ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಕೆಶಿ, 2-3 ವರ್ಷಗಳಿಂದ ನಿಂತು ಹೋಗಿದ್ದ ಪಕ್ಷದ ನೂತನ ಕಚೇರಿ ಕಟ್ಟಡ ಕಾಮಗಾರಿ ಪುನರಾರಂಭಿಸಲು ಯಾವುದೇ ವಿಘ್ನಗಳು ಅಡ್ಡಿಯಾಗಬಾರದು, ನಮ್ಮ ನಾಯಕರು, ಕಾರ್ಯಕರ್ತರಿಗೆ ಒಳ್ಳೆಯದಾಗಬೇಕು, ಇಲ್ಲಿ ಕೆಲಸ ಮಾಡಲಿರುವ ಕಾರ್ವಿುಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ವಿಘ್ನ ನಿವಾರಕ ವಿನಾಯಕನ ಪೂಜೆ ನೆರವೇರಿಸಲಾಗಿದೆ ಎಂದರು. ಕರೊನಾ ಸಮಯದಲ್ಲಿ ಎಲ್ಲ ಸಮಸ್ಯೆಗಳು ಬಗೆಹರಿದು, ಲೋಕಕಲ್ಯಾಣವಾಗಲಿ ಎಂಬ ಉದ್ದೇಶದೊಂದಿಗೆ ನಮ್ಮ ನಂಬಿಕೆಗಳ ಪ್ರಕಾರ ಪೂಜೆ ಮಾಡಲಾಗಿದೆ. ಇದು ಪದಗ್ರಹಣಕ್ಕೆ ಸಂಬಂಧಿಸಿದ್ದಲ್ಲ ಎಂದವರು ಸ್ಪಷ್ಟಪಡಿಸಿದರು.

ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಲೀಂ ಅಹಮದ್, ಶಾಸಕ ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಟಿ.ಬಿ.ಜಯಚಂದ್ರ ಮತ್ತಿತರ ಮುಖಂಡರು ಭಾಗಿಯಾಗಿದ್ದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್ ಪಾಟೀಲ್ ಆಗಮಿಸಿದ್ದರು. ಇದೇ ವೇಳೆ ಮಂಗಳಮುಖಿಯರು ಪಕ್ಷದ ಕಚೇರಿಗೆ ಆಗಮಿಸಿ ಒಳಿತಾಗುವಂತೆ ಹರಸಿದರು. ಹೋಮ ನಡೆಸಿದ ಬಳಿಕ ತಮಿಳುನಾಡಿನ ಅರುಣಾಚಲೇಶ್ವರ ದೇವರ ದರ್ಶನ ಪಡೆಯುವ ಸಲುವಾಗಿ ಡಿ.ಕೆ ಶಿವಕುಮಾರ್ ತೆರಳಿದರು.

ನಾವೇನಿದ್ದರೂ ಪ್ರಸಾದ ಸ್ವೀಕರಿಸುತ್ತೇವೆ: ಕರೊನಾ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಸರ್ಕಾರಕ್ಕೆ ಯಾವ ಸಲಹೆ ನೀಡುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ್, ಸರ್ಕಾರದ ನಿರ್ಧಾರದಲ್ಲಿ ನಾವು ತಲೆ ಹಾಕುವುದಿಲ್ಲ. ಅನೇಕ ವೈದ್ಯರು ಮಂತ್ರಿಗಳಿದ್ದಾರೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದನ್ನು ಪ್ರಸಾದವಾಗಿ ಸ್ವೀಕರಿಸುತ್ತೇವೆ. ಸರ್ಕಾರದಲ್ಲಿ ಅನೇಕ ಬುದ್ಧಿವಂತರಿದ್ದಾರೆ, ಅವರೊಂದಿಗೆ ಸ್ಪರ್ಧೆ ಮಾಡಲು ಹೋಗುವುದಿಲ್ಲ ಎಂದರು.

1-2 ದಿನದಲ್ಲಿ ಪದಗ್ರಹಣ ದಿನಾಂಕ ಪ್ರಕಟ: ವಿರೋಧ ಪಕ್ಷದ ನಾಯಕರು ಬೇರೆ ಊರಿನಲ್ಲಿದ್ದ ಕಾರಣ ಪದಗ್ರಹಣ ದಿನಾಂಕದ ಚರ್ಚೆ ಇನ್ನೂ ನಡೆಸಿಲ್ಲ. ಪಕ್ಷದ ಹಿರಿಯ ನಾಯಕರ ಜತೆ ರ್ಚಚಿಸಿ ಒಂದೆರಡು ದಿನಗಳಲ್ಲೇ ಅಧಿಕಾರ ಗ್ರಹಣದ ಪ್ರತಿಜ್ಞಾ ಕಾರ್ಯಕ್ರಮದ ದಿನಾಂಕ ಪ್ರಕಟಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಈಗ ಪೂಜೆ ನಡೆದ ಸ್ಥಳದಿಂದಲೇ ಪ್ರತಿಜ್ಞಾವಿಧಿ ಸ್ವೀಕರಿಸಲು ಡಿಕೆಶಿ ಉತ್ಸುಕರಾಗಿದ್ದು, ಬಹುತೇಕ ಜುಲೈ 2ರಂದು ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net