

ರಾಣೆಬೆನ್ನೂರ: ತಾಲೂಕಿನ ಹನುಮನಹಳ್ಳಿ-ತೆರೆದಹಳ್ಳಿ ಬಳಿಯಿರುವ ಗೋಲ್ಡನ್ ಹ್ಯಾಚರೀಸ್ ಗ್ರೀನ್ ಎನರ್ಜಿ ಬಯೋ ಡಿಫೈನರೈಜ್ ಆ್ಯಂಡ್ ಎಥೆನಾಲ್ ಪ್ರೋಡಕ್ಷನ್ ಕಂಪನಿಯ ಕಲುಷಿತ ನೀರನ್ನು ಕುಮುದ್ವತಿ ನದಿಯಿಂದ ಹೊರಹಾಕಲು ಎರಡು ದಿನದಿಂದ ಕಸರತ್ತು ನಡೆದಿದೆ. ಆದರೆ, ನದಿಪಾತ್ರದಿಂದ ನೀರು ಮಾತ್ರ ಕರಗುವ ಲಕ್ಷಣ ಕಂಡು ಬರುತ್ತಿಲ್ಲ.
ನದಿಪಾತ್ರದಲ್ಲಿ ಎರಡು ಕಿ.ಮೀ.ನಷ್ಟು ದೂರು ನೀರು ಹೋಗಿದ್ದರಿಂದ ನೀರು ಹೊರಹಾಕುವುದೇ ಸವಾಲಿನ ಕೆಲಸವಾಗಿದೆ. ಕಂಪನಿಯವರು ಜಿಲ್ಲಾಡಳಿತದ ಸೂಚನೆ ಮೇರೆಗೆ 2 ಟ್ಯಾಂಕರ್‌ಗಳನ್ನು ತರಿಸಿ ನದಿಪಾತ್ರದಲ್ಲಿರುವ ನೀರನ್ನು ಪಂಪಸೆಟ್ ಮೂಲಕ ತುಂಬಿ ಹೊರಹಾಕಲು ಪ್ರಯತ್ನ ನಡೆಸಿದ್ದಾರೆ. ಕಲುಷಿತ ನೀರು ಈಗಾಗಲೇ ಖಾಲಿ ಆಗಬೇಕಿತ್ತು. ಆದರೆ, ಕಂಪನಿಯವರ ಕಾರ್ಯ ತ್ವರಿತಗತಿಯಲ್ಲಿ ನಡೆಯದ ಕಾರಣ ನದಿಪಾತ್ರದಲ್ಲಿ ನೀರು ವಾರದಿಂದ ಎಷ್ಟು ಇದೆಯೋ ಈಗಲೂ ಅಷ್ಟೇ ಇದೆ.
ಮಳೆ ನೀರು ಬರುವಷ್ಟರಲ್ಲಿ ಸ್ವಚ್ಛಗೊಳಿಸಿ…
ತಾಲೂಕಿನಲ್ಲಿ ಈಗಾಗಲೇ ಮಳೆ ಆರಂಭಗೊಂಡಿದೆ. ಎರಡು ದಿನದಿಂದ ರಾತ್ರಿ ನಿರಂತರ ಮಳೆ ಸುರಿದಿದೆ. ಅಲ್ಲದೆ ಉತ್ತರ ಕನ್ನಡ ಜಿಲ್ಲೆ ಹಾಗೂ ಮಾಸೂರು, ರಟ್ಟಿಹಳ್ಳಿ ಭಾಗದಲ್ಲಿ ಹೆಚ್ಚು ಮಳೆ ಸುರಿದರೆ ಕುಮುದ್ವತಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರಲಿದೆ. ಆಗ ಕಲುಷಿತ ನೀರು ತುಂಗಭದ್ರಾ ನದಿಗೆ ಹರಿದು ಬರಲಿದೆ. ಹೀಗಾದರೆ ನಗರಕ್ಕೆ ಬರುವ ತುಂಗಭದ್ರಾ ನದಿಯ ಕುಡಿಯುವ ನೀರು ಕಲುಷಿತಗೊಳ್ಳಲಿದೆ. ಆದ್ದರಿಂದ ಆದಷ್ಟು ಬೇಗ ಕಲುಷಿತ ನೀರನ್ನು ಖಾಲಿ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ…
ಕಲುಷಿತ ನೀರು ನದಿ ಸೇರಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಶನಿವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲುಷಿತ ನೀರನ್ನು ಕೂಡಲೇ ಖಾಲಿ ಮಾಡುವಂತೆ ಕಂಪನಿಯವರಿಗೆ ಸೂಚಿಸಿದ್ದಾರೆ. ಅಲ್ಲದೆ ಎಥೆನಾಲ್ ಪ್ರೋಡಕ್ಷನ್ ತಾತ್ಕಾಲಿಕವಾಗಿ ಬಂದ್ ಮಾಡಬೇಕು. ಅದಕ್ಕೆ ಸಂಬಂಧಿಸಿದ ದಾಖಲಾತಿ ಹಾಜರು ಪಡಿಸಬೇಕು ಎಂದು ಸೂಚಿಸಿದ್ದಾರೆ.
ರೈತರಿಂದ ಗೇರಾವು…
ಕಲುಷಿತ ನೀರು ತೆರವುಗೊಳಿಸುವ ಸ್ಥಳಕ್ಕೆ ಭಾನುವಾರ ಭೇಟಿ ನೀಡಿದ ಪರಿಸರ ಮಾಲಿನ್ಯ ಇಲಾಖೆ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿಗಳ ವಾಹನಕ್ಕೆ ಸ್ಥಳೀಯ ರೈತರು ಗೇರಾವು ಹಾಕಿ ಪ್ರತಿಭಟನೆ ನಡೆಸಿದರು. ದಿನದ 24 ಗಂಟೆಗಳ ಕಾಲ ಕೆಲಸ ಮಾಡಿಸಿ ಕಲುಷಿತ ನೀರನ್ನು ತೆರವುಗೊಳಿಸದಿದ್ದರೆ ಕಲುಷಿತ ನೀರಿನಿಂದ ಆಗುವ ತೊಂದರೆಗಳಿಗೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು. ರೈತರಾದ ಪ್ರಕಾಶ ಶಿರಗೇರಿ, ಹನುಮಂತಪ್ಪ ಹೊಸಪೇಟೆ, ಬಸನಗೌಡ ದೊಡ್ಡಗೌಡ್ರ, ಮಹದೇಶ ಬುಳ್ಳಾಪುರ, ಪರಸಪ್ಪ ಗಿರೀಶ ಸಿರಗೇರಿ, ರಾಜಶೇಖರ ಬಣಕಾರ, ಚಂದ್ರಣ್ಣ ಬಣಕಾರ, ತಿಪ್ಪಣ್ಣ ಪೂಜಾರ ಮತ್ತಿತರರು ಪಾಲ್ಗೊಂಡಿದ್ದರು.