ರಾಜ್ಯಸಭೆಯ 55 ಸ್ಥಾನಗಳಿಗೆ ಮಾರ್ಚ್​ 26ಕ್ಕೆ ಚುನಾವಣೆ

Parliament
Published on

ನವದೆಹಲಿ: ರಾಜ್ಯಸಭೆಯ 55 ಸ್ಥಾನಗಳು ಏಪ್ರಿಲ್​ನಲ್ಲಿ ಖಾಲಿಯಾಗಲಿದ್ದು, ಅವುಗಳ ಭರ್ತಿಗೆ ಮಾರ್ಚ್ 26ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಮಂಗಳವಾರ ಘೋಷಿಸಿದೆ.

ಹದಿನೇಳು ರಾಜ್ಯಗಳನ್ನು ಪ್ರತಿನಿಧಿಸುವ ಈ ಸ್ಥಾನಗಳು ಏಪ್ರಿಲ್​ನ ವಿವಿಧ ದಿನಾಂಕಗಳಲ್ಲಿ ಖಾಲಿ ಆಗಲಿವೆ. ಸದಸ್ಯರ ಅವಧಿ ಮುಗಿದು ನಿವೃತ್ತರಾಗುತ್ತಿರುವ ಕಾರಣ ಈ ಸ್ಥಾನಗಳು ಖಾಲಿಯಾಗುತ್ತಿವೆ.ಈ ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಮಾರ್ಚ್​ 6ರಂದು ಪ್ರಕಟಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಮಾರ್ಚ್ 13 ಕೊನೇ ದಿನವಾಗಿ ಇರಲಿದೆ. ಅದೇ ರೀತಿ ಮತದಾನ ಮಾರ್ಚ್ 26ರಂದು ನಡೆಯಲಿದ್ದು ಅಂದೇ ಮತದಾನ ಮುಗಿದು ಒಂದು ಗಂಟೆಯ ನಂತರದಲ್ಲಿ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಪ್ರಕಟವಾಗಲಿದೆ ಎಂದು ಆಯೋಗ ತಿಳಿಸಿದೆ.

ರಾಜ್ಯಸಭೆಯಲ್ಲಿ ಖಾಲಿ ಆಗಲಿರುವ 55 ಸ್ಥಾನಗಳ ಪೈಕಿ ಮಹಾರಾಷ್ಟ್ರದ ಏಳು, ತಮಿಳುನಾಡಿನ 6, ಪಶ್ಚಿಮ ಬಂಗಾಳ, ಬಿಹಾರದ ತಲಾ 5, ಮಧ್ಯಪ್ರದೇಶ, ರಾಜಸ್ಥಾನ್​ನ ತಲಾ ಮೂರು, ತೆಲಂಗಾಣ, ಛತ್ತೀಸ್​​ಗಢ, ಹರಿಯಾಣ, ಜಾರ್ಖಂಡ್​ ಗಳ ತಲಾ 2, ಹಿಮಾಚಲ ಪ್ರದೇಶ, ಮಣಿಪುರ, ಮೇಘಾಲಯಗಳ ತಲಾ 1 ಸ್ಥಾನಗಳಿವೆ.

ಒಟ್ಟಾರೆ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು. ರಾಜ್ಯಸಭೆಯಲ್ಲಿ ಟಿಎಂಸಿ, ವೈಎಸ್​ಆರ್ ಕಾಂಗ್ರೆಸ್​ ಪಕ್ಷದ ಸದಸ್ಯಬಲದಲ್ಲೂ ವೃದ್ಧಿಯನ್ನು ನಿರೀಕ್ಷಿಸಲಾಗುತ್ತಿದೆ.

ರಾಜ್ಯಸಭೆಯಲ್ಲಿ ಅವಧಿಪೂರ್ಣ ಗೊಳಿಸಿ ನಿವೃತ್ತರಾಗುತ್ತಿರುವವರ ಪೈಕಿ ಎನ್​ಸಿಪಿ ನಾಯಕ ಶರದ್ ಪವಾರ್, ಕೇಂದ್ರ ಸಚಿವ ರಾಮದಾಸ್ ಅಠವಳೆ(ಆರ್​ಪಿಐ ಅಠವಳೆ), ಕಾಂಗ್ರೆಸ್​ನ ಹಿರಿಯ ನೇತಾರ ಮೋತಿಲಾಲ್ ವೋರಾ, ಮಾಜಿ ಕೇಂದ್ರ ಸಚಿವ, ಬಿಜೆಪಿ ವಿಜಯ್ ಗೋಯೆಲ್, ಕಾಂಗ್ರೆಸ್​ನ ಕುಮಾರಿ ಸೆಲ್ಜಾ, ಮಧ್ಯಪ್ರದೇಶ ಮಾಜಿ ಸಿಎಂ ದಿಗ್ವಿಜಯ ಸಿಂಗ್

ಪ್ರಮುಖರು.  (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net