

ಶಿಕಾರಿಪುರ: ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಮತದಾನ ಶಾಂತಿಯುತವಾಗಿ ನಡೆಯಿತು. ತಾಲೂಕು ಕಚೇರಿ ಮಹಡಿಯ ಮೇಲೆ ಪಧವೀಧರರು, ಶಿಕ್ಷಕ ಮತದಾರರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ತಾಲೂಕು ಕಚೇರಿ ಎದುರಿನ ರಸ್ತೆಗೆ ನಾಲ್ಕೂ ಕಡೆಗಳಿಂದ ಬ್ಯಾರಿಕೇಡ್ ಹಾಕಲಾಗಿತ್ತು. ಜತೆಗೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಬೆಳಗ್ಗೆಯೇ ಸಣ್ಣ ಮಳೆ ಬಂದಿದ್ದು ತಂಪಾದ ವಾತಾವರಣ ಸೃಷ್ಟಿ ಮಾಡಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕುಟುಂಬ ಸಮೇತರಾಗಿ ಮತದಾನ ಮಾಡಿದರು. ತೇಜಸ್ವಿನಿ ರಾಘವೇಂದ್ರ, ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ ಎಚ್.ಟಿ..ಬಳಿಗಾರ್, ಕಾಂಗ್ರಸ್‌ನ ಹಿರಿಯ ನಾಯಕ ನಗರದ ಮಹದೇವಪ್ಪ ಮತ್ತಿತರ ಪ್ರಮುಖರು ಮತದಾನ ಮಾಡಿದರು. ಶಿರಾಳಕೊಪ್ಪದಲ್ಲಿ ತೊಗರ್ಸಿ ಮಳೆಹಿರೇಮಠದ ಶ್ರೀ ಮಹಂತ ದೇಶೀಕೇಂದ್ರ ಸ್ವಾಮೀಜಿ ಮತದಾನ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಲೋಕಸಭೆ ಚುನಾವಣೆ ನಂತರ ರಾಷ್ಟ್ರೀಯ ವಾಹಿನಿಗಳು ಮತ್ತು ಖಾಸಗಿ ಸಂಸ್ಥೆಗಳು ನಡೆಸಿದ ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಬಿಜೆಪಿ ಮತ್ತೆ ಅಧಿಕಾರ ಹಿಡಿದು ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲಿದ್ದಾರೆ. ಜನತೆಗೆ ದೇಶದ ಸಮಗ್ರತೆ, ರಕ್ಷಣೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ನಿರೀಕ್ಷೆ ಇತ್ತು. ಜನರರ ನಿರೀಕ್ಷೆ ನಿಜವಾಗಲಿದೆ ಎಂದರು.
ವಿಧಾನ ಪರಿಷತ್ ಚುನಾವಣೆ ನೈಋತ್ಯ ಕ್ಷೇತ್ರದಲ್ಲಿಯೂ ನಮ್ಮ ಮೈತ್ರಿ ಅಭ್ಯರ್ಥಿಗಳಾದ ಡಾ. ಧನಂಜಯ ಸರ್ಜಿ, ಶಿಕ್ಷಕರ ಕ್ಷೇತ್ರದ ಎಸ್.ಎಲ್.ಬೋಜೇಗೌಡ ಅವರು ಅತಿ ಹೆಚ್ಚು ಪ್ರಾಶಸ್ತ್ಯದ ಮತಗಳಿಂದ ಜಯಗಳಿಸುವ ವಿಶ್ವಾಸವಿದೆ ಎಂದು ಹೇಳಿದರು.