

ನವದೆಹಲಿ: ದೆಹಲಿಯ 70 ವಿಧಾನಸಭಾ ಕ್ಷೇತ್ರಗಳ 13,750 ಮತಗಟ್ಟೆಗಳಲ್ಲಿ ಶನಿವಾರ ಬೆಳಗ್ಗೆ 8ರಿಂದ ಮತದಾನ ಆರಂಭವಾಗಿದೆ. ಹಲವು ಅಭ್ಯರ್ಥಿಗಳು ಮಂದಿರಗಳಿಗೆ ಭೇಟಿ ದೇವರ ದರ್ಶನ ಪಡೆದು ಮತಗಟ್ಟೆಗಳತ್ತ ತೆರಳಿದ್ದಾರೆ. ಮತದಾರರು ಉತ್ಸಾಹದಿಂದ ಬೆಳಗ್ಗೆ 7 ಗಂಟೆಗೇ ಮತಗಟ್ಟೆ ಸಮೀಪ ಸರದಿ ನಿಂತಿರುವ ದೃಶ್ಯ ಕಂಡುಬಂದಿದೆ.
ಚುನಾವಣಾ ಆಯೋಗದ ವರದಿ ಪ್ರಕಾರ, ದೆಹಲಿಯಲ್ಲಿ ಒಟ್ಟು 1,46,92,136 ಮತದಾರರಿದ್ದಾರೆ. ಇದರಲ್ಲಿ 80.55 ಲಕ್ಷ ಪುರುಷರು ಹಾಗೂ 66.35 ಲಕ್ಷ ಮಹಿಳಾ ಮತದಾರರಿದ್ದಾರೆ. ಚುನಾವಣೆಗಾಗಿ ಸುಮಾರು 90 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಒಂದು ಮತಗಟ್ಟೆಯನ್ನು ಅಂಗಾಂಗ ವೈಫಲ್ಯವಿರುವವರೇ ಸಂಪೂರ್ಣವಾಗಿ ನಿಯಂತ್ರಿಸುತ್ತಿದ್ದಾರೆ.
380 ಮತಗಟ್ಟೆಗಳಲ್ಲಿ ಮಹಿಳೆಯರೇ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲಿದ್ದು, ಭದ್ರತೆಗೂ ಕೂಡ ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾರರನ್ನು ಆಕರ್ಷಿಸುವ ಸಲುವಾಗಿ ಪ್ರತಿ ಕ್ಷೇತ್ರಗಳಲ್ಲಿ ಒಂದು ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಇಲ್ಲಿ ಸಾಮಾನ್ಯ ಬೂತ್ಗಳಿಗಿಂತ ವೈದ್ಯಕೀಯ ಕಿಟ್, ಗಾಲಿಕುರ್ಚಿಗಳು, ರ‍್ಯಾಂಪ್ ಸೌಲಭ್ಯಗಳನ್ನು ಒದಗಿಸಲಾಗಿದೆ. (ಏಜೆನ್ಸೀಸ್ )