

Pollachi sexual assault case: ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 2019ರ ಪೊಲ್ಲಾಚಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಒಂಬತ್ತು ಆರೋಪಿಗಳನ್ನು ತಪ್ಪಿತಸ್ಥರೆಂದು ತಮಿಳುನಾಡಿನ ಕೊಯಮತ್ತೂರು ಮಹಿಳಾ ನ್ಯಾಯಾಲಯವು ಇಂದು (ಮೇ 13) ಮಹತ್ವದ ತೀರ್ಪು ನೀಡಿದೆ. ನ್ಯಾಯಧೀಶೆ ನಂದಿನಿ ದೇವಿ ಅವರು ಶೀಘ್ರದಲ್ಲೇ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಿದ್ದಾರೆ.
2019ರಲ್ಲಿ, ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಆಘಾತಕಾರಿ ಲೈಂಗಿಕ ದೌರ್ಜನ್ಯ ಪ್ರಕರಣ ಬೆಳಕಿಗೆ ಬಂದಿತು. ಆರೋಪಿಗಳು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವತಿಯರನ್ನು ಟಾರ್ಗೆಟ್ ಮಾಡಿ, ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡುತ್ತಿದ್ದರು. ಆರೋಪಿಗಳನ್ನು ಶಬರಿರಾಜನ್ ಅಲಿಯಾಸ್ ರಿಶ್ವಂತ್ (32) ತಿರುನಾವುಕರಸು (34), ಟಿ ವಸಂತ ಕುಮಾರ್ (30), ಎಂ ಸತೀಶ್ (33) ಆರ್. ಮಣಿ ಅಲಿಯಾಸ್ ಮಣಿವಣ್ಣನ್ (30), ಪಿ ಬಾಬು (33), ಹರೋನ್ ಪಾಲ್ (32) ಅರುಳನಂತಂ (39) ಮತ್ತು ಅರುಣ್ ಕುಮಾರ್ (33) ಎಂದು ಗುರುತಿಸಲಾಗಿದೆ. ಎಲ್ಲರೂ ಪೊಲ್ಲಾಚಿ ಮೂಲದವರು. ಅವರನ್ನು 2019ರಲ್ಲಿ ಬಂಧಿಸಿ ಸೇಲಂನ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ.
ಇಂದು ಬೆಳಗ್ಗೆ ಆರೋಪಿಗಳನ್ನು ಭಾರೀ ಪೊಲೀಸ್ ಭದ್ರತೆಯಲ್ಲಿ ಕೊಯಮತ್ತೂರಿನ ಮಹಿಳಾ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಯಿತು. ಕೊಯಮತ್ತೂರಿನಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದ್ದು, ನ್ಯಾಯಾಲಯ ಸಂಕೀರ್ಣ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿಯೂ ಸಹ ಭಾರೀ ಕಣ್ಗಾವಲು ಇರಿಸಲಾಗಿತ್ತು. ಸಾಕ್ಷಿಗಳ ವಿಚಾರಣೆ, ಪ್ರಾಸಿಕ್ಯೂಷನ್ ಮತ್ತು ಪ್ರತಿವಾದಿಗಳ ವಾದಗಳು ಪೂರ್ಣಗೊಂಡ ನಂತರ, ನ್ಯಾಯಾಲಯವು ಎಲ್ಲ ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಿತು.
ಕೊಯಮತ್ತೂರಿನಲ್ಲಿ ಗ್ಯಾಂಗ್ ಒಂದು ಯುವತಿಯರನ್ನು ಗುರಿಯಾಗಿಸಿಕೊಂಡು, ಅವರೊಂದಿಗೆ ಸ್ನೇಹ ಬೆಳೆಸಿ, ಅವರನ್ನು ಏಕಾಂತ ಸ್ಥಳಗಳಿಗೆ ಕರೆದೊಯ್ದು, ಲೈಂಗಿಕ ಕಿರುಕುಳ ನೀಡುತ್ತಿತ್ತು. ಅಲ್ಲದೆ, ದುಷ್ಕೃತ್ಯದ ವಿಡಿಯೋ ರೆಕಾರ್ಡ್ ಮಾಡಿ ಬೆದರಿಕೆ ಹಾಕುತ್ತಿದ್ದರು. ಈ ಗ್ಯಾಂಗ್ ವಿರುದ್ಧ ಧೈರ್ಯವಾಗಿ ಮುಂದೆ ಬಂದು ಸಂತ್ರಸ್ತೆಯೊಬ್ಬರು ದೂರು ದಾಖಲಿಸಿದ ನಂತರ ಈ ಪ್ರಕರಣ ಸಾರ್ವಜನಿಕ ಗಮನಕ್ಕೆ ಬಂದಿತು. ಆಕೆಯ ದೂರಿನ ಆಧಾರದ ಮೇಲೆ, ಒಂಬತ್ತು ವ್ಯಕ್ತಿಗಳ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಕ್ರಿಮಿನಲ್ ಪಿತೂರಿ ಆರೋಪಗಳನ್ನು ಒಳಗೊಂಡಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) 13 ವಿಭಿನ್ನ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ಎಲ್ಲ ಒಂಬತ್ತು ಆರೋಪಿಗಳಿಗೆ ಆರು ವರ್ಷಗಳ ಕಾಲ ಜಾಮೀನು ನಿರಾಕರಿಸಲಾಯಿತು.
ಆರೋಪಿಗಳಲ್ಲಿ, ಪಾಲ್, ಬಾಬು ಮತ್ತು ಅರುಳಾನಂದಂ ಎಐಎಡಿಎಂಕೆಯ ಮಾಜಿ ಪದಾಧಿಕಾರಿಗಳಾಗಿದ್ದರು. ಆರಂಭದಲ್ಲಿ ರಾಜ್ಯ ಪೊಲೀಸರಿಂದ ತನಿಖೆಗೆ ಒಳಗಾದ ಈ ಪ್ರಕರಣವನ್ನು 2019ರ ಏಪ್ರಿಲ್ 25 ರಂದು ಸಿಬಿಐಗೆ ವರ್ಗಾಯಿಸಲಾಯಿತು. ನಂತರ, 2019ರ ಮೇ 21 ರಂದು, ಕೇಂದ್ರ ತನಿಖಾ ಸಂಸ್ಥೆಯು ಎಲ್ಲಾ ಒಂಬತ್ತು ಆರೋಪಿಗಳ ವಿರುದ್ಧ ಕೊಯಮತ್ತೂರು ಮಹಿಳಾ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಿತು. ವಿಚಾರಣೆಯ ದೀರ್ಘ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು, ವಿಚಾರಣೆಯನ್ನು ಆದಷ್ಟು ಬೇಗ ಇತ್ಯರ್ಥಪಡಿಸಲು ವಿಶೇಷ ನ್ಯಾಯಾಲಯ ಕೊಠಡಿಯನ್ನು ನಿಗದಿಪಡಿಸಬೇಕೆಂದು ಮದ್ರಾಸ್ ಹೈಕೋರ್ಟ್ ನಿರ್ದೇಶಿಸಿತು. ಆರೋಪಿಗಳಿಂದ ವಶಪಡಿಸಿಕೊಂಡ ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳು ಪ್ರಕರಣದಲ್ಲಿ ಪ್ರಮುಖ ಸಾಕ್ಷ್ಯಗಳಾಗಿವೆ. 1,500 ಪುಟಗಳ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಇದೀಗ ಒಂಬತ್ತು ಆರೋಪಿಗಳು ನ್ಯಾಯಾಧೀಶರಿಂದ ತಪ್ಪಿತಸ್ಥರೆಂದು ಸಾಬೀತಾಗಿದ್ದು, ಅವರಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಪ್ರಾಸಿಕ್ಯೂಷನ್ ವಾದಿಸಿದೆ ಎಂದು ಸಿಬಿಐ ವಿಶೇಷ ಸಾರ್ವಜನಿಕ ಅಭಿಯೋಜಕ ಸುರೇಂದ್ರ ಮೋಹನ್ ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಸಂತ್ರಸ್ತೆಯರ ಗುರುತುಗಳು ಮತ್ತು ಸುರಕ್ಷತೆಯನ್ನು ಕಟ್ಟುನಿಟ್ಟಾಗಿ ರಕ್ಷಿಸಲಾಗಿದೆ. ಸಂತ್ರಸ್ತೆಯರು ಪದೇ ಪದೇ ಸಾಮೂಹಿಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರಿಂದ, ಕಠಿಣ ಶಿಕ್ಷೆಗಳನ್ನು ನೀಡುವಂತೆ ನ್ಯಾಯಾಲಯವನ್ನು ವಿನಂತಿಸಿದ್ದೇವೆ ಎಂದು ಸುರೇಂದ್ರ ಮೋಹನ್ ಹೇಳಿದರು.
ಅಖಿಲ ಭಾರತ ಪ್ರಜಾಸತ್ತಾತ್ಮಕ ಮಹಿಳಾ ಸಂಘವು ಈ ತೀರ್ಪನ್ನು ಸ್ವಾಗತಿಸಿ ನ್ಯಾಯಾಲಯದ ಹೊರಗೆ ಘೋಷಣೆಗಳನ್ನು ಕೂಗಿತು. (ಏಜೆನ್ಸೀಸ್)