ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಸಲ್ಲದು

klr union
ಕೋಲಾರ ತಾಲೂಕಿನ ಖಾಸಗಿ ರೆಸಾರ್ಟ್​ನಲ್ಲಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ತರಬೇತಿಯನ್ನು ಕೋಮುಲ್​ ಅಧ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಉದ್ಘಾಟಿಸಿದರು. ಒಕ್ಕೂಟದ ನಿರ್ದೇಶಕರಾದ ಕಲ್ವಮಂಜಲಿ ಟಿ.ಕೆ.ಬೈರೇಗೌಡ, ಎಚ್​.ವಿ.ನಾಗರಾಜ್​, ಎ.ಸಿ.ನಾಗರಾಜ್​, ಕಾಂತಮ್ಮ, ಬಿ.ವಿ.ಸಾಮೇಗೌಡ, ಬಿ.ರಮೇಶ್​, ಕೆ.ಕೆ.ಮಂಜು, ಶ್ರೀನಿವಾಸ್​ ಇದ್ದರು.
Published on

ಕೋಲಾರ: ರಾಜಕಾರಣ ಚುನಾವಣೆಗೆ ಮಾತ್ರ ಸೀಮಿತಗೊಳಿಸಿ, ಸಹಕಾರ ಕ್ಷೇತ್ರದಲ್ಲಿ ಅವಕಾಶಗಳಿಗೆ ಮಾತ್ರ ಬಳಸಿದರೆ, ಸಂಸ್ಥೆ ಕಟ್ಟಲು ಸಾಧ್ಯವಿಲ್ಲ. ಹಾಗಾಗಿ ಇಲ್ಲಿ ರಾಜಕೀಯ ಸಲ್ಲದು ಎಂದು ಶಾಸಕ ಕೆ.ವೈ ನಂಜೇಗೌಡ ಹೇಳಿದರು.

ತಾಲೂಕಿನ ಖಾಸಗಿ ರೆಸಾರ್ಟ್​ನಲ್ಲಿ ರಾಜ್ಯ ಸಹಕಾರ ಮಹಾಮಂಡಳಿ, ಜಿಲ್ಲಾ ಸಹಕಾರ ಒಕ್ಕೂಟ, ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಾಗೂ ಸಹಕಾರ ಇಲಾಖೆಯಿಂದ ಜಿಲ್ಲೆಯ ಹಾಲು ಒಕ್ಕೂಟದ ಅಧಿಕಾರಿಗಳಿಗೆ ಮತ್ತು ಕಚೇರಿ ಉಪವ್ಯವಸ್ಥಾಪಕರು, ಸಹಾಯಕ ವ್ಯವಸ್ತಾಪಕರು, ವಿಸ್ತರಣಾಧಿಕಾರಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಹಕಾರ ಸಂಗಳಲ್ಲಿ ಪಾರದರ್ಶಕತೆ ಕಾಪಾಡಲು ಡೇರಿಗಳಲ್ಲಿ ಸಾಮಾನ್ಯ ಸಾಫ್ಟ್​ವೇರ್​ ಅಳವಡಿಕೆಗೆ ಸರ್ಕಾರ ತೀರ್ಮಾನಿಸಿದೆ. ಇದರಿಂದ ಬಿಲ್​, ಹಾಲು ಸೋರಿಕೆ ತಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್​ ಸಾಧನೆ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿತ್ತು. ಇದೀಗ ಬ್ಯಾಂಕಿಗೆ ಆಡಳಿತ ಮಂಡಳಿ ಇಲ್ಲದಿರುವುದು, ಹಲವು ಮಹಿಳಾ ಸಂಘಗಳಿಗೆ ಸಾಕಷ್ಟು ತೊಂದರೆ ಎದುರಾಗುತ್ತಿದೆ. ಜಿಲ್ಲೆಯ ಕೋಮುಲ್​ ಮತ್ತು ಡಿಸಿಸಿ ಬ್ಯಾಂಕ್​ ಸಹಕಾರ ಕ್ಷೇತ್ರಗಳು ಉತ್ತಮ ಸಾಧನೆ ಮೂಲಕ ಎತ್ತರದಲ್ಲಿದೆ. ಕೋಮುಲ್​ ಒಕ್ಕೂಟವೂ ನಾನಾ ಕಾರ್ಯಕ್ರಮಗಳನ್ನು ಹಾಲು ಉತ್ಪಾದಕರಿಗೆ ನೀಡುವ ಮೂಲಕ ಇತಿಹಾಸ ಪುಟಗಳಲ್ಲಿ ಉಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.

ರಾಜ್ಯದ ಹಾಲು ಒಕ್ಕೂಟಗಳಲ್ಲಿ ಮಂಗಳೂರು ಒಕ್ಕೂಟ ಬಿಟ್ಟರೆ, ಹಾಸನ, ಬೆಂಗಳೂರು ಜಿಲ್ಲೆಗಳ ಹಾಲಿನ ದರ ಹೆಚ್ಚಳ ಮಾಡಿಲ್ಲ. ಕೋಲಾರ ಹಾಲು ಒಕ್ಕೂಟ ಹೆಚ್ಚಿನ ದರ ನೀಡಲಾಗುತ್ತಿದೆ. ಇದರಿಂದ ಹಾಲು ಉತ್ಪಾದಕರ ಸಂಖ್ಯೆಯು ಹೆಚ್ಚಾಗಿದೆ ಎಂದು ಶಾಸಕ ಕೆ.ವೈ ನಂಜೇಗೌಡ ತಿಳಿಸಿದರು.

ಕೋಮುಲ್​ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್​ ಮಾತನಾಡಿ, ಹಾಲು ಒಕ್ಕೂಟದಿಂದ ಡೈರಿಗಳಿಗೆ ಗುಣಮಟ್ಟದ ಮೇಲೆ ಹಾಲಿನ ದರ ನೀಡುತ್ತಿಲ್ಲ. ಕೆಲವೊಂದು ಡೈರಿಗಳು ಹಾಲಿನ ಗುಣಮಟ್ಟಕ್ಕೆ ತಕ್ಕಂತೆ ದರ ನೀಡುತ್ತಿದೆ. ಹೀಗಾಗಿ ಉತ್ಪಾದಕರು ಗುಣಮಟ್ಟದ ಹಾಲನ್ನು ಡೈರಿಗಳಿಗೆ ನೀಡುವ ಮೂಲಕ ಹೆಚ್ಚಿನ ದರ ಪಡೆದುಕೊಳ್ಳುವಂತಾಗಬೇಕು ಎಂದರು.

ಜಿಲ್ಲಾ ಸಹಕಾರಿ ಯೂನಿಯನ್​ ಅಧ್ಯಕ್ಷ ಡಿ.ಆರ್​.ರಾಮಚಂದ್ರಗೌಡ ಮಾತನಾಡಿ, ಕೋಮುಲ್​ ಮತ್ತು ಡಿಸಿಸಿ ಬ್ಯಾಂಕ್​ ಜಿಲ್ಲೆಯ ರೈತರ ಮತ್ತು ಮಹಿಳೆಯರ ಎರಡು ಕಣ್ಣುಗಳಿದ್ದಂತೆ ಎಂದು ಹೇಳಿದರು.

ಅಧಿಕಾರಿಗಳು ರೈತರಿಗೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಒಕ್ಕೂಟಕ್ಕೆ ಗುಣಮಟ್ಟದ ಹಾಲನ್ನು ನೀಡುವಂತೆ ಜಾಗೃತಿ ಮೂಡಿಸಬೇಕು. ಸಹಕಾರ ಕ್ಷೇತ್ರಗಳು ಎಂದಿಗೂ ರಾಜಕೀಯ ಮುಕ್ತವಾಗಿರಬೇಕು ಎಂದರು.

ಒಕ್ಕೂಟದ ನಿರ್ದೇಶಕರಾದ ಯೂನಿಸ್​ ಷರಿಫ್​, ಉರಿಗಿಲಿ ರುದ್ರುಸ್ವಾಮಿ, ಮೂರಾಂಡಹಳ್ಳಿ ಗೋಪಾಲಪ್ಪ, ಪೆಮ್ಮಶೆಟ್ಟಹಳ್ಳಿ ಸುರೇಶ್​, ಪಾಕರಹಳ್ಳಿ ವೆಂಕಟೇಶ್​, ಗೋವರ್ಧನರೆಡ್ಡಿ, ಶಂಕರನಾರಾಯಣಗೌಡ, ವಿ.ರಘುಪತಿರೆಡ್ಡಿ, ಎನ್​.ನಾಗರಾಜ್​, ಕೆ.ಎಂ.ಮಂಜುನಾಥ್​, ಅರುಣಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net