ಚಂದ್ರಗುತ್ತಿ ದಸರಾ ಉತ್ಸವದಲ್ಲಿ ರಾಜಕೀಯ

Dasara programme
ತಾಲೂಕಿನ ಅಂದವಳ್ಳಿ ಗ್ರಾಮದ ರಾಮೇಶ್ವರ ದೇವಸ್ಥಾನ ಆವರಣದಲ್ಲಿ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆಯ ವತಿಯಿಂದ ಮನೆ ಮನೆ ದಸರಾ ಕಾರ್ಯಕ್ರಮದಡಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ಹಮ್ಮಿಕೊಂಡಿದ್ದ ನವದುರ್ಗ ವೈಭವ ನೃತ್ಯರೂಪಕ ಕಾರ್ಯಕ್ರಮ ನಡೆಯಿತು.
Published on: 

ಸೊರಬ: ದೇವರ ಕಾರ್ಯದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಆದರೆ ಚಂದ್ರಗುತ್ತಿಯಲ್ಲಿ ಈ ಬಾರಿ ರಾಜಕೀಯ ಸಮಿತಿ ಮಾಡಿಕೊಂಡು ಒಂದು ಗುಂಪು ರಾಜಕೀಯವಾಗಿ ದಸರಾ ಕಾರ್ಯಕ್ರಮ ಮಾಡಿದ್ದಾರೆ ಎಂದು ಶ್ರೀ ರೇಣುಕಾಂಬ ಗ್ರಾಮೀಣ ಸೇವಾ ಸಂಸ್ಥೆ ಅಧ್ಯಕ್ಷ ಆರ್.ಶ್ರೀಧರ್ ಹುಲ್ತಿಕೊಪ್ಪ ದೂರಿದರು.

ತಾಲೂಕಿನ ಅಂದವಳ್ಳಿ ಗ್ರಾಮದ ರಾಮೇಶ್ವರ ದೇವಸ್ಥಾನದಲ್ಲಿ ಸೇವಾ ಸಂಸ್ಥೆಯಿಂದ ಮನೆ ಮನೆ ದಸರಾ ಕಾರ್ಯಕ್ರಮದಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಿಂದ ಹಮ್ಮಿಕೊಂಡಿದ್ದ ನವದುರ್ಗ ವೈಭವ ನೃತ್ಯರೂಪಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಸರಾ ಹಬ್ಬವನ್ನು ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇಲ್ಲಿಂದ ಮೈಸೂರಿಗೆ ಹೋಗಿ ದಸರಾ ವೈಭವ ನೋಡಲಾಗುತ್ತಿತ್ತು. ಈಗ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಹಾಗೆಯೇ ಅಧಿದೇವತೆ ಚಂದ್ರಗುತ್ತಿ ಶ್ರೀ ರೇಣುಕಾಬಾ ದೇವಿ ಸನ್ನಿಧಿಯಲ್ಲಿ ನಡೆಯುತ್ತಿರಲಿಲ್ಲ. ಇದನ್ನು ಮನಗಂಡು ನಾನು ನನ್ನ ಅಧ್ಯಕ್ಷತೆಯಲ್ಲಿ ಜಾತ್ಯತೀತ, ಪಕ್ಷಾತೀತವಾಗಿ ಸಮಿತಿ ರಚಿಸಿ ಕಳೆದ 10 ವರ್ಷಗಳಿಂದ ಅದ್ದೂರಿಯಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು. ಕಳೆದ ವರ್ಷ ಆನೆ ತಂದು ಅಂಬಾರಿ ಮೇಲೆ ವಿಜಯದಶಮಿ ಮೆರವಣಿಗೆ ಮಾಡಿದ ಕೀರ್ತಿ ನಮ್ಮದು. ಪ್ರತಿ ದಿನ ರಾತ್ರಿ ಅನ್ನ ದಾಸೋಹ, ಮಾತೆಯರಿಗೆ ಉಡಿ ತುಂಬುವ ಶಾಸ್ತ್ರ ಹೀಗೆ ಅನೇಕ ಧಾರ್ಮಿಕ ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಈ ಬಾರಿ ರಾಜಕೀಯ ಸಮಿತಿ ಮಾಡಿಕೊಂಡು ದಸರಾ ಉತ್ಸವ ಮಾಡಿರುವುದು ಸರಿಯಲ್ಲ ಎಂದರು.

ದೇವರ ಕಾರ್ಯದಲ್ಲಿ ಯಾರೊಬ್ಬರೂ ರಾಜಕೀಯ ಮಾಡಬಾರದು. ಸಾರ್ವಜನಿಕವಾಗಿ ಆಚರಿಸುವ ಹಬ್ಬದಲ್ಲಿ ರಾಜಕೀಯ ಬೆರೆಸುವ ಸಣ್ಣತನ ಬಿಡಬೇಕು. ಅದಕ್ಕಾಗಿ ಮನೆ ಮನೆ ದಸರಾ ಹಮ್ಮಿಕೊಂಡಿದ್ದು, ಶೃಂಗೇರಿ ಶಾರದಾ ಪೀಠದ ಅಧೀನದಲ್ಲಿ ಬರುವ ಅಂದವಳ್ಳಿ ಗ್ರಾಮ ಆಯ್ಕೆ ಮಾಡಿಕೊಂಡು ಇಲ್ಲಿ ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಗುರುಕುಮಾರ್ ಪಾಟೀಲ್, ಗ್ರಾಮ ಸಮಿತಿ ಅಧ್ಯಕ್ಷ ದಿವಾಕರ್ ನಾಯಕ್, ಮಾರಿಕಾಂಬಾ ಸಮಿತಿ ಅಧ್ಯಕ್ಷ ವಿಜಯ್, ಕೊಟ್ರೇಶ್ ಸ್ವಾಮಿ, ಗಿರೀಶ್ ಗೌಡ, ದಾನಶೇಖರ ಗೌಡ, ರಾಮಕೃಷ್ಣ ಶೆಟ್ರು, ಎಸ್.ಡಿ.ನಾಯ್ಕ, ವಿಶ್ವನಾಥ್, ಬಸವರಾಜ್. ಕುಮಾರ್, ಮಲ್ಲೇಶಪ್ಪ. ಬಂಗಾರಪ್ಪ, ಕೃಷ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net