ಕಣ್ಣಿಗೆ ಟ್ಯಾಟೂ ಹಾಕಿಸಿಕೊಂಡ ಯುವತಿಗೆ ದಿನ ಕಳೆದಂತೆ ಎದುರಾಯ್ತು ಶಾಕ್​ ಮೇಲೆ ಶಾಕ್​!

Poland Model
Published on

ವಾರ್ಸ: ಟ್ಯಾಟೂ ಎಷ್ಟು ಸುಂದರವೋ ಅದನ್ನ ಹಾಕಿಸಿಕೊಳ್ಳುವುದು ಅಷ್ಟೇ ಅಪಾಯಕಾರಿ ಎಂದು ಪರಿಣಿತರು ಆಗಾಗ ಹೇಳುವುದನ್ನು ಕೇಳಿದ್ದೇವೆ. ಅಂಥದ್ದೇ ಘಟನೆಯೊಂದು ಇದೀಗ ಪೊಲೆಂಡ್​ನಲ್ಲಿ ವರದಿಯಾಗಿದೆ.

ಮಹಿಳೆಯೊಬ್ಬಳು ತನ್ನ ಕಣ್ಣುಗುಡ್ಡೆಗಳಿಗೆ ರಂಗು ಹಾಕಿಸಿಕೊಳ್ಳುವ ವೇಳೆ ಟ್ಯಾಟೂ ಕಲಾವಿದ ಮಾಡಿದ ಎಡವಟ್ಟಿಗೆ ಎರಡು ಕಣ್ಣನ್ನು ಕಳೆದುಕೊಂಡು ಸಂಪೂರ್ಣ ಕುರುಡಿಯಾಗಿದ್ದಾಳೆ. ಸಂತ್ರಸ್ತೆಯ ಹೆಸರು ಅಲೆಕ್ಸಾಂಡ್ರ ಸ್ಯಾಡೊವಸ್ಕ. ಈಕೆ ಪಶ್ಚಿಮ ಪೊಲೆಂಡ್​ನ ರೊಕ್ಲಾವ್​ ನಿವಾಸಿ.

ಕಣ್ಣಿನ ಬಿಳಿ ಭಾಗಕ್ಕೆ ಈಗಾಗಲೇ ಕಪ್ಪು ಬಣ್ಣದ ಟ್ಯಾಟೂ ಹಾಕಿಸಿಕೊಂಡಿರುವ ರ‍್ಯಾಪ್​ ಕಲಾವಿದ ಪೊಪೆಕ್​ರನ್ನು ಅನುಸರಿಸಲು ನಿರ್ಧರಿಸಿದ ಸ್ಯಾಡೊವಸ್ಕ, ಟ್ಯಾಟೂ ಕಲಾವಿದನ ಬಳಿಗೆ ತೆರಳಿ ತನ್ನ ಕಣ್ಣುಗಳಿಗೆ ರಂಗು ಹಾಕಿಸಿಕೊಂಡಿದ್ದಳು.

ಪ್ರಾರಂಭದಲ್ಲಿ ಯಾವುದೇ ತೊಂದರೆ ಎದುರಾಗಿರಲಿಲ್ಲ. ಬಳಿಕ ಕಣ್ಣಿನಲ್ಲಿ ನೋವು ಕಾಣಿಸಿಕೊಳ್ಳಲು ಆರಂಭಿಸಿತು. ಇದನ್ನು ಟ್ಯಾಟೂ ಕಲಾವಿದನ ಬಳಿ ಆಕೆ ದೂರಿದ್ದಕ್ಕೆ ಇದು ಸಾಮಾನ್ಯ, ನೋವು ನಿರೋಧಕ ತೆಗೆದುಕೋ ಎಂದು ಹೇಳಿದ್ದನಂತೆ. ಇದಾದ ಕೆಲವೇ ದಿನಗಳಲ್ಲಿ ತನ್ನ ಬಲಗಡೆ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡ ಬಳಿಕ ಸ್ಯಾಡೊವಸ್ಕ ವೈದ್ಯರ ಬಳಿ ತೆರಳುತ್ತಾಳೆ. ಈ ವೇಳೆ ಇದು ವಾಸಿ ಮಾಡಲಾಗದು, ಆದಷ್ಟು ಬೇಗ ಇನ್ನೊಂದು ಕಣ್ಣನ್ನು ಕಳೆದುಕೊಳ್ಳುತ್ತೀಯ ಎಂದು ಎಚ್ಚರಿಸುತ್ತಾರೆ.

ಇದೀಗ ಟ್ಯಾಟೂ ಕಲಾವಿದನನ್ನು ಬಂಧಿಸಲಾಗಿದ್ದು, ಮೂರು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾನೆ. ಬಂಧಿತ ಟ್ಯಾಟೂ ಕಲಾವಿದನನ್ನು ಪಿಯೊಟ್ರ್​​ ಎ ಎಂದು ಗುರುತಿಸಲಾಗಿದೆ. ಟ್ಯಾಟೂ ಹಾಕುವಾಗ ಕಲಾವಿದ ಗಂಭೀರ ಪ್ರಮಾದವನ್ನು ಎಸಗಿರುವುದು ತನಿಖಾ ವೇಳೆ ತಿಳಿದುಬಂದಿದೆ. ಚರ್ಮದ ಮೇಲೆ ಹಚ್ಚೆ ಹಾಕುವಾಗ ದೇಹದ ಇಂಕ್​ ಕಣ್ಣಿಗೆ ತಾಗಬಾರದು ಎಂದು ಪರಿಣಿತರು ಹೇಳಿದ್ದಾರೆ. ಈ ರೀತಿ ಆಗಿರುವುದರಿಂದ ಸ್ಯಾಡೊವಸ್ಕ ಶಾಶ್ವತ ಕುರುಡಾಗಿದ್ದಾಳೆ.

ಕಲಾವಿದನಿಗೆ ಸೂಕ್ಷ್ಮವಾಗಿ ಹೇಗೆ ಟ್ಯಾಟೂ ಹಾಕಬೇಕೆಂಬುದು ತಿಳಿದಿಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಇದು ಆತನಿಗೂ ತಿಳಿದಿದ್ದರೂ ಟ್ಯಾಟೂ ಹಾಕಲು ನಿರ್ಧರಿಸಿದ್ದೇ ದುರಂತಕ್ಕೆ ಸಾಕ್ಷಿಯಾಗಿದೆ ಎಂದು ಸಂತ್ರಸ್ತೆ ಪರ ವಕೀಲ ದೂರಿದ್ದಾರೆ.

ವೈದ್ಯರು ಕೂಡ ಮತ್ತೊಮ್ಮೆ ದೃಷ್ಟಿ ಬರುತ್ತದೆ ಎಂಬುದನ್ನು ಖಚಿತ ಪಡಿಸಿಲ್ಲ. ಇದರಿಂದ ಸಂತ್ರಸ್ತೆ ತುಂಬಾ ಮನನೊಂದಿದ್ದಾಳೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net