ಸಂವಿಧಾನ ವಿರೋಧಿಗಳಿಂದ ಒಡೆದು ಆಳುವ ನೀತಿ: ಸಿಎಂ ಸಿದ್ದರಾಮಯ್ಯ ಅಭಿಮತ

cm
Published on

ಬೆಂಗಳೂರು: ಸಂವಿಧಾನ ವಿರೋಧಿಗಳ ಕೈಗೆ ಅಧಿಕಾರ ನೀಡಿ ನಿಮ್ಮ ಮತ್ತು ನಿಮ್ಮ ಮಕ್ಕಳ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ. ಸಂವಿಧಾನ ವಿರೋಧಿಗಳ ಒಡೆದು ಆಳುವ ನೀತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದ ಪುರಭವನದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ಗುರುವಾರ ಆಯೋಜಿಸಿದ್ದ ಡಿ. ದೇವರಾಜ ಅರಸು ಜಯಂತೋತ್ಸವ ಮತ್ತು ರಾಜ್ಯ ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಸಂವಿಧಾನ ರಚನಾ ಸಮಿತಿಗೆ ಅಂಬೇಡ್ಕರ್ ಅಧ್ಯಕ್ಷರಾಗದೇ ಹೋಗಿದ್ದರೆ ನಮ್ಮ ದೇಶಕ್ಕೆ ಇಷ್ಟೊಂದು ಅರ್ಥಪೂರ್ಣವಾದ ಸಂವಿಧಾನ ದೊರೆಯುತ್ತಿರಲಿಲ್ಲ. ಅಂಬೇಡ್ಕರ್ ಮತ್ತು ಸಂವಿಧಾನದ ಆಶಯಗಳನ್ನು ತಮ್ಮ ಮುಖ್ಯಮಂತ್ರಿ ಸ್ಥಾನದ ಮೂಲಕ ಸಮರ್ಥವಾಗಿ ಜಾರಿ ಮಾಡಲು ದೇವರಾಜ ಅರಸು ಶ್ರಮಿಸಿದರು. ಹೀಗಾಗಿ ಅವರಿಗಿಂತ ಮುಂಚಿನ ಯಾವ ಮುಖ್ಯಮಂತ್ರಿಗಳೂ ಜಾರಿ ಮಾಡದ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಜಾರಿ ಮಾಡಲು ಸಾಧ್ಯವಾಯಿತು ಎಂದರು.

ದೇವರಾಜ ಅರಸು ಅವರು ಉಳುವವನೇ ಭೂ ಒಡೆಯ ಎನ್ನುವ ಕಾನೂನನ್ನು ಬಿಜೆಪಿ ಯವರು ಉಲ್ಟಾ ಮಾಡಿ ಉಳ್ಳವನೇ ಭೂ ಒಡೆಯ ಎಂದು ಬದಲಾಯಿಸಿಬಿಟ್ಟಿದ್ದಾರೆ. ಇದಕ್ಕಾಗಿ ಸಂವಿಧಾನ 79ಎ, ಬಿ ನಿಯಮವನ್ನೇ ರದ್ದುಪಡಿಸಿದ್ದಾರೆ. ಸಂವಿಧಾನ ವಿರೋಧಿಗಳಿಗೆ, ಬಡ, ಮಧ್ಯಮ ವರ್ಗದ ವಿರೋಧಿಗಳ ಕೈಗೆ ಅಧಿಕಾರ ಕೊಟ್ಟರೆ ಸಾಮಾಜಿಕ ನ್ಯಾಯ ನೆಗೆದು ಬೀಳುತ್ತದೆ ಎಂದು ಆಕ್ರೋಶ ಹೊರಹಾಕಿದರು.

ಅಧಿಕಾರ ಯಾರ ಕೈಗೆ ಕೊಡಬೇಕು ಎನ್ನುವ ಸ್ಪಷ್ಟ ತಿಳಿವಳಿಕೆ ದಲಿತ-ಶೂದ್ರ ಸಮುದಾಯ ಪಡೆದುಕೊಳ್ಳಬೇಕು. ದಲಿತ-ಶೂದ್ರ-ಬಡವ ಮತ್ತು ಮಧ್ಯಮ ವರ್ಗಗಳಿಗೆ ಬದುಕಿನ ಅವಕಾಶ ದೊರಕಿದ್ದು ಸಂವಿಧಾನದಿಂದ. ಈ ಸಂವಿಧಾನವನ್ನು ದ್ಷೇಷಿಸುವವರ ಕೈಗೆ ಅಧಿಕಾರ ಕೊಟ್ಟರೆ ಬಡವ-ಮಧ್ಯಮ ವರ್ಗದವರ ಉದ್ದಾರ ಆಗಲು ಹೇಗೆ ಸಾಧ್ಯ ಎಂದು ಸಿಎಂ ಪ್ರಶ್ನಿಸಿದರು.

ಹಿಂದುಳಿದವರಿಗೆ ಮೀಸಲಾತಿ ನೀಡಿದ ಅರಸ:

ದೇವರಾಜ ಅರಸು ಅವರು ಹಾವನೂರು ವರದಿ ಜಾರಿ ಮಾಡುವವರೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿರಲಿಲ್ಲ. ಎಷ್ಟೇ ವಿರೋಧ ಬಂದರೂ ಎದೆಗುಂದದೆ ಎದೆಗಾರಿಕೆಯಿಂದ ಹಾವನೂರು ವರದಿ ಜಾರಿ ಮೀಡಿದ್ದು ಅರಸು ಅವರು ಎಂದು ಸಿದ್ದರಾಮಯ್ಯ ವಿವರಿಸಿದರು.

ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಡಿಎಸ್‌ಎಸ್ ಮುಖಂಡ ಡಿ.ಜಿ.ಸಾಗರ್ ಸೇರಿ ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಿಜೆಪಿಯಿಂದ ಭಯಾನಕ ಸುಳ್ಳು!:

ಬಡವರ ಮತ್ತು ಮಧ್ಯಮ ವರ್ಗದವರ ಬದುಕಿಗೆ ಶಕ್ತಿ ತುಂಬುವ ಐದು ಗ್ಯಾರಂಟಿಗಳಿಗೆ ಎಸ್‌ಸಿಪಿ, ಟಿಎಸ್‌ಪಿ ಹಣ ಬಳಕೆ ಮಾಡಲಾಗುತ್ತಿದೆ ಎಂದು ಬಿಜೆಪಿ ಭಯಾನಕ ಸುಳ್ಳು ಹೇಳುತ್ತಿದೆ. ಇದನ್ನು ನಂಬಬೇಡಿ, ದಾಖಲೆಗಳನ್ನು ನೋಡಿ ಬಿಜೆಪಿಯವರಿಗೆ ಪಾಠ ಕಲಿಸಿ ಎಂದು ಸಿಎಂ ಸಿಟ್ಟಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net