ಅಡ್ಡಾದಿಡ್ಡಿ ಗುಂಡು ಹಾರಿಸಿದ ಪೊಲೀಸ್, ಮಹಿಳೆಯೊಬ್ಬಳ ಸಾಯಿಸಿ ಆತ್ಮಹತ್ಯೆ

Shoot
Published on

ಕೋಲ್ಕತ: ಅಡ್ಡಾದಿಡ್ಡಿ ಗುಂಡು ಹಾರಿಸಿದ ಪೊಲೀಸ್​ ಮಹಿಳೆಯೊಬ್ಬಳ ಸಾವಿಗೂ ಕಾರಣನಾಗಿದ್ದಲ್ಲದೆ ಕೊನೆಗೂ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಶ್ಚಿಮ ಬಂಗಾಳದಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಕೋಲ್ಕತದ ಪಾರ್ಕ್ ಸರ್ಕಸ್​ ಕ್ರಾಸಿಂಗ್ ಬಳಿ ಹಾಡಹಗಲೇ ಈ ಗುಂಡಿನ ದಾಳಿ ನಡೆದಿದೆ. ಬಾಂಗ್ಲಾ ದೇಶ ಡೆಪ್ಯುಟಿ ಹೈ ಕಮಿಷನ್​ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ ಈ ಪೊಲೀಸ್​, ಕಚೇರಿಯಿಂದ ಸುಮಾರು 50 ಮೀಟರ್ ದೂರದಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ.

ತನ್ನ ಸರ್ವಿಸ್​ ರೈಫಲ್​ನಿಂದ ಈತ ಗುಂಡು ಹಾರಿಸಲಾರಂಭಿಸಿದ್ದು, ಆ ಪೈಕಿ ಒಂದು ಗುಂಡು ದ್ವಿಚಕ್ರವಾಹನದಲ್ಲಿ ಹಿಂದೆ ಕುಳಿತುಕೊಂಡು ಹೋಗುತ್ತಿದ್ದ ಮಹಿಳೆಗೂ ತಗುಲಿದ್ದು, ಆಕೆ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಬೈಕ್ ಚಲಾಯಿಸುತ್ತಿದ್ದವ ಕೂಡ ಗಾಯಗೊಂಡಿದ್ದು, ಆತ ತಪ್ಪಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾನೆ. ಬಳಿಕ ಪೊಲೀಸ್ ಅದೇ ರೈಫಲ್​​ನಿಂದ ತನಗೂ ಗುಂಡು ಹಾರಿಸಿಕೊಂಡಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಐದು ನಿಮಿಷಗಳಲ್ಲಿ ಇವೆಲ್ಲವೂ ನಡೆದುಹೋಗಿದ್ದು, ಸುಮಾರು 9 ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈತ ಇಲ್ಲಿಗೆ ಇಂದಷ್ಟೇ ಇಲ್ಲಿಗೆ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರಿಂದ ಯಾರಿಗೂ ಈತನ ಪರಿಚಯ ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net