ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಠಾಣೆ ಮಾಹಿತಿ ಕೊಡುವ ಕ್ಯೂರ್‌ಕೋಡ್

CP (6)
Published on

ಬೆಂಗಳೂರು: ಪೊಲೀಸ್ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಅಳವಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಅಪರಾಧ, ಅನಾಹುತ ಸಂಭವಿಸಿದಾಗ ಯಾವ ಠಾಣೆಗೆ ದೂರು ಕೊಡಬೇಕೆಂಬ ಗೊಂದಲ ಇದ್ದರೆ, ಈ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿದರೆ ಸಂಪೂರ್ಣ ವಿವರ ಸಿಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.

ದೊಮ್ಮಲೂರಿನ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಏರ್ಪಡಿಸಿದ್ದ ‘ಮಾಸಿಕ ಜನಸಂಪರ್ಕ ಸಭೆ’ಯಲ್ಲಿ ಮಾತನಾಡಿದರು. ಸಾರ್ವಜನಿಕ ಸ್ಥಳದಲ್ಲಿ ಅನಾಹುತ ಮತ್ತು ದುರ್ಘಟನೆ ಸಂಭವಿಸಿದಾಗ ಆ ಸ್ಥಳ ಯಾವ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುತ್ತದೆ ಎಂಬು ಗೊತ್ತಾಗದೆ, ದೂರವಾಣಿ ಸಂಖ್ಯೆಯೂ ಲಭ್ಯವಾಗದೆ ಪರದಾಟ ಅನುಭವಿಸಬೇಕಾಗುತ್ತದೆ.

ಜತೆಗೆ ಪೊಲೀಸರಿಗೂ ಘಟನಾ ಸ್ಥಳಕ್ಕೆ ಬರಲು ಕೆಲಕಾಲ ಗೊಂದಲ ಉಂಟಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಪಾರ್ಕ್, ಶಾಲಾ ಕಾಲೇಜು, ಬಸ್ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್ ಕೋಡ್ ಒಳಗೊಂಡ ಪೋಸ್ಟರ್ ಅಳವಡಿಸಲಾಗುತ್ತದೆ. ಯಾವುದೇ ಅನಾಹುತ ಅಥವಾ ದುರ್ಘಟನೆ ಸಂಭವಿಸಿದಾಗ ಈ ಕ್ಯೂಆರ್ ಕೋಡ್ ಸ್ಕಾೃನ್ ಮಾಡಿದಾಗ ಆ ಸ್ಥಳ ಯಾವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುತ್ತದೆ ಮತ್ತು ಅಲ್ಲಿಂದ ಎಷ್ಟು ದೂರದಲ್ಲಿದೆ. ಠಾಣೆಯ ಲೊಕೇಷನ್‌ಸಹಿತ ಮಾರ್ಗವನ್ನು ಸೂಚಿಸುವ ವ್ಯವಸ್ಥೆಯನ್ನು ಅದರಲ್ಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆ ಮತ್ತು ಕಿರುಕುಳ ಆಗದಂತೆ ಮುಂದಿನ ವಾರದೊಳಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net