

ಶಿಕಾರಿಪುರ: ಪೊಲೀಸರ ಬಗ್ಗೆ ಅನಗತ್ಯ ಭಯ ಬೇಡ. ಅವರ ಸೇವಾವಧಿಯಲ್ಲಿ ನಿರಂತರವಾಗಿ ನಿಮ್ಮ ರಕ್ಷಣೆಗಾಗಿ ಸಮಯ ಕೊಡುತ್ತಾರೆ. ಅವರನ್ನು ನಿಮ್ಮ ಕುಟುಂಬದ ಸದಸ್ಯರ ರೀತಿ ತಿಳಿದುಕೊಳ್ಳಿ ಎಂದು ಡಿವೈಎಸ್‌ಪಿ ಕೇಶವ್ ಹೇಳಿದರು.
ಜಿಲ್ಲಾ ಪೊಲೀಸ್ ಮತ್ತು ಶಿಕಾರಿಪುರ ಪೊಲೀಸ್ ಉಪವಿಭಾಗದಿಂದ ಸುರಭಿ ಭವನದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ಸ್ವಾಸ್ಥೃ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಶಕ್ತಿಮೀರಿ ಕೆಲಸ ಮಾಡುತ್ತಿದೆ. ದುಷ್ಟರಿಂದ ಕಳ್ಳರು, ದರೋಡೆಕೋರರಿಂದ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡುತ್ತಿದೆ ಎಂದರು.
ಕೆಲವು ದೃಶ್ಯಮಾಧ್ಯಮಗಳು ಪೊಲೀಸರನ್ನು ತುಂಬ ಕೆಟ್ಟದಾಗಿ ಬಿಂಬಿಸುತ್ತಿವೆ. ಕುಟುಂಬವನ್ನು ಬಿಟ್ಟು ಹಗಲಿರುಳು, ಬಿಸಿಲು ಮಳೆಯೆನ್ನದೆ ನಿಮ್ಮ ನೆಮ್ಮದಿಗಾಗಿ ಕೆಲಸಮಾಡುವ ಪೊಲೀಸರು ನಿಮ್ಮ ಸ್ನೇಹಿತರಲ್ಲವೇ ಎಂದು ಪ್ರಶ್ನಿಸಿದರು.
ಪ್ರತಿ ಬೀಟ್‌ನಲ್ಲಿ 40-70 ಮನೆಗಳ ಗುಂಪನ್ನು ಮಾಡಿ ಅದರಲ್ಲಿ ಒಬ್ಬರು ಸರ್ವಸಮ್ಮತ ವ್ಯಕ್ತಿಯನ್ನು ಆಯ್ಕೆ ಮಾಡಿ ಅವರ ಮೂಲಕ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರ ನಡುವೆ ಸಮನ್ವಯ ಸಾಧಿಸುವುದು ಮತ್ತು ಸ್ಥಳೀಯ ಕುಂದು ಕೊರತೆಗಳ ಬಗ್ಗೆ ಗಮನಹರಿಸಿ ಪರಿಹರಿಸುವುದು, ಅಪರಾಧ ತಡೆಯುವುದು ಮೂಲ ಉದ್ದೇಶ ಎಂದರು.
ಸಿಪಿಐ ಸಂತೋಷ್ ಪಾಟೀಲ್ ಮಾತನಾಡಿ, ಸೈಬರ್ ಕ್ರೈಂ, ಬಾಲ್ಯವಿವಾಹ, ಕೋಮುಗಲಭೆ ಮತ್ತು ಶಾಲಾ ಕಾಲೇಜಿಗೆ ಮೂರ್ನಾಲ್ಕು ದಿನಗಳಿಂದ ಗೈರಾದ ವಿದ್ಯಾರ್ಥಿನಿಯರ ಬಗ್ಗೆ ಮಾಹಿತಿ ನೀಡುವುದು, ಪೋಕ್ಸೋದಂತಹ ಪ್ರಕರಣಗಳಿರಲಿ, ಸಂಚಾರ ಸಂಬಂಧಿ ಸಮಸ್ಯೆಯಿರಲಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಪಟ್ಟಣ ಠಾಣೆ ಇನ್‌ಸ್ಪೆಕ್ಟರ್ ಶರತ್‌ಕುಮಾರ್, ಪಿಎಸ್‌ಐ ಶೋಭಾರಾಣಿ, ಎಎಸ್‌ಐ ಮಲ್ಲೇಶಪ್ಪ, ಡಾ. ಅಮ್ಜದ್ ಹುಸೇನ್ ಕರ್ನಾಟಕಿ, ಬಿ.ಸಿ.ವೇಣುಗೋಪಾಲ್, ಕೆ.ಎಸ್.ಹುಚ್ರಾಯಪ್ಪ, ಪರೋಪಕಾರಂನ ಲಕ್ಷ್ಮಣ್, ಅಂಗಡಿ ಜಗದೀಶ್, ಮಂಜುನಾಥ್ ಇತರರಿದ್ದರು.