ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು

Police Martyrs' Day
ಶಿವಮೊಗ್ಗ ಡಿಎಆರ್ ಮೈದಾನದಲ್ಲಿ ಪೊಲೀಸ್ ಹುತಾತ್ಮರಿಗೆ ಜಿಲ್ಲಾ ನ್ಯಾಯಾಧೀಶ ಮಂಜುನಾಥ ನಾಯಕ್ ಗೌರವ ನಮನ ಸಲ್ಲಿಸಿದರು. ಎನ್.ಹೇಮಂತ್, ಜಿ.ಕೆ.ಮಿಥುನ್‌ಕುಮಾರ್, ಎ.ಜಿ.ಕಾರಿಯಪ್ಪ, ರಮೇಶ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ದೇಶದ ಗಡಿಕಾಯುವ ಸೈನಿಕರ ಸ್ಮರಣೀಯ ಸೇವೆಯನ್ನೂ ಮೀರಿ ಹೆಚ್ಚು ಒತ್ತಡ, ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರ ಸೇವೆ ಅತ್ಯಂತ ಮೌಲಿಕವಾದುದು ಮತ್ತು ಸ್ಮರಣೀಯವಾದುದು ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶ ಮಂಜುನಾಥ ನಾಯಕ್ ಹೇಳಿದರು.

ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಮಂಗಳವಾರ ಪೊಲೀಸ್ ಇಲಾಖೆಯಿಂದ ಪೊಲೀಸ್ ಹುತಾತ್ಮರ ದಿನಾಚರಣೆ ಅಂಗವಾಗಿ ಹುತಾತ್ಮ ಆರಕ್ಷಕರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯಾನಂತರ ಇಲ್ಲಿವರೆಗೆ 36 ಸಾವಿರ ಪೊಲೀಸ್ ಸಿಬ್ಬಂದಿ, ಸೇನೆಯ ಹೋರಾಟದಲ್ಲಿ 23 ಸಾವಿರ ಸೈನಿಕರು ಮೃತಪಟ್ಟಿದ್ದಾರೆ. ಯಾವುದೇ ಸಂದರ್ಭದಲ್ಲೂ ಸದಾ ಸನ್ನದ್ಧರಾಗಿದ್ದು, ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಅಭಿನಂದನೀಯವಾದುದ್ದು ಹಾಗೂ ಸೈನಿಕರ ಸೇವೆಗಿಂತ ಮಹತ್ವದ್ದಾಗಿದೆ ಎಂದರು.

ಪೊಲೀಸ್ ಸಿಬ್ಬಂದಿಗೆ ದೊರೆಯುವ ಗೌರವ ಅವರ ಕುಟುಂಬದ ಎಲ್ಲ ಸದಸ್ಯರಿಗೂ ದೊರೆಯುವಂತಾಗಬೇಕು. ಕೇವಲ ವೇತನ-ಭತ್ಯೆಗಳಿಂದ ಅವರನ್ನು ಸಮಾಧಾನಿಸುವುದು ಸಾಧ್ಯವಾಗದು. ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಶಿವಮೊಗ್ಗ ಅತಿಸೂಕ್ಷ್ಮ ಪ್ರದೇಶ. ಆದಾಗ್ಯೂ ಶಿವಮೊಗ್ಗ ಜಿಲ್ಲೆಯ ಶಾಂತಿಯುತ ವಾತಾವರಣಕ್ಕೆ ಪೊಲೀಸ್ ಇಲಾಖೆಯ ಸೇವೆ ಅನುಪಮವಾದುದು ಎಂದು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್ ಮಾತನಾಡಿದರು. ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್‌ಪಿ.ಎ.ಜಿ.ಕಾರಿಯಪ್ಪ, ರಮೇಶ್, ಬೆನಕ ಪ್ರಸಾದ್, ಮಂಜುನಾಥ್ ಅಣಜಿ, ಕೆಎಸ್‌ಆರ್‌ಪಿ ಕಮಾಂಡೆಂಟ್ ಎಸ್.ಯುವಕುಮಾರ್, ಡಿವೈಎಸ್‌ಪಿಗಳಾದ ಬಾಬು ಆಂಜನಪ್ಪ, ಸಂಜೀವ್‌ಕುಮಾರ್, ದಿಲೀಪ್, ಅರವಿಂದ್ ಕಲಗುಚ್ಚಿ, ಕೇಶವ್, ನಾಗರಾಜ್, ಕೃಷ್ಣಮೂರ್ತಿ ಸೇರಿದಂತೆ ಪೊಲೀಸ್ ಇಲಾಖೆಯ ವಿವಿಧ ಶ್ರೇಣಿಯ ಅಧಿಕಾರಿ-ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net