

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ವಶದಲ್ಲಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರು ಇಂದು ಧಾರವಾಡ ಜಿಲ್ಲಾ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ಇಂದು ವಿನಯ್ ಕುಲಕರ್ಣಿ ಸಿಬಿಐ ಕಸ್ಟಡಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ವೈದ್ಯರು ವಿನಯ್ ಕುಲಕರ್ಣಿ ಅವರನ್ನು ಹುಬ್ಬಳ್ಳಿಯ ಸಿಎಆರ್ ಗ್ರೌಂಡ್ನ ಕಚೇರಿಯಲ್ಲಿ ತಪಾಸಣೆ ಮಾಡಿದ್ದು, ಕೆಲವೇ ಕ್ಷಣಗಳಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡುಹೋಗಲಿದ್ದಾರೆ.
ಧಾರವಾಡದ ಜುಬ್ಲಿ ವೃತ್ತದ ಬಳಿ ಇರುವ ಜಿಲ್ಲಾ ನ್ಯಾಯಾಲಯದ ಬಳಿ ಸುಮಾರು 150 ಪೊಲೀಸರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.