Meta AI ಕೊಟ್ಟ ಅಲರ್ಟ್​​ಗೆ 7 ನಿಮಿಷಗಳಲ್ಲಿ ಆತ್ಮಹತ್ಯೆಯಿಂದ ಯುವಕನ ಜೀವ ಉಳಿಸಿದ ಪೊಲೀಸರು!

Bbau (27)
Published on

ಲಕ್ನೋ: ಮೆಟಾ(Meta AI)ದ ಕೃತಕ ಬುದ್ಧಿಮತ್ತೆಯ ಎಚ್ಚರಿಕೆಯನ್ನು ಅನುಸರಿಸಿ ಲಕ್ನೋದ ನಾಗರಂ ಪೊಲೀಸರು 7 ನಿಮಿಷಗಳಲ್ಲಿ ಮನೆಗೆ ತಲುಪುವ ಮೂಲಕ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಎನ್ನಲಾದ ಯುವಕನ ಜೀವವನ್ನು ಉಳಿಸಿದ ಘಟನೆ ಲಕ್ನೋದಲ್ಲಿ ಇತ್ತೀಚಿಗೆ ನಡೆದಿದೆ.

ಇನ್ನು ಈ ಪ್ರಕರಣವು ಮದಾರ್ಪುರ್ ಗ್ರಾಮದಲ್ಲಿ ನಡೆದಿದ್ದು, 19 ವರ್ಷದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾನೆ. ಮೆಟಾದ AI ವ್ಯವಸ್ಥೆಯು ತಕ್ಷಣವೇ ಪೋಸ್ಟ್ ಅನ್ನು ಗಮನಿಸಿ ಆತ್ಮಹತ್ಯೆ ಎಚ್ಚರಿಕೆಯನ್ನು ನೀಡಿದೆ. ಎಚ್ಚರಿಕೆಯನ್ನು ಸ್ವೀಕರಿಸಿದ ಕೂಡಲೇ, ನಾಗರಂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಪೊಲೀಸ್​ ತಂಡವು 7 ನಿಮಿಷಗಳಲ್ಲಿ ಯುವಕನ ಮನೆಗೆ ತಲುಪಿ ಪರಿಸ್ಥಿತಿಯನ್ನು ನಿಯಂತ್ರಿಸಿತದೆ ಎಂದು ವರದಿಯಾಗಿದೆ.

ಯುವಕ ವಿಷ ಸೇವನೆ ಮಾಡಿರಲಿಲ್ಲ

ಯುವಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೋಸ್ಟ್ ಮಾಡಿದ್ದಾನೆಯೇ ಹೊರತಾಗಿ ಯಾವುದೇ ತರಹ ವಿಷ ಸೇವನೆಯಾಗಲಿ ಅಥವಾ ಆತ್ಮಹತ್ಯೆ ಪ್ರಯತ್ನ ಆಗಲಿ ಮಾಡಿರಲಿಲ್ಲ. ಬದಲಾಗಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ, ಪ್ರೀತಿಯಲ್ಲಿ ಮನನೊಂದು ಈ ಪೋಸ್ಟ್ ಮಾಡಿದ್ದಾನೆ ಎಂದು ತನಿಖೆಯಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಪೊಲೀಸರು ಯುವಕನಿಗೆ ಸಲಹೆ ನೀಡಿದ್ದು, ಕೌನ್ಸೆಲಿಂಗ್ ಬಳಿಕ ಯುವಕನು ತನ್ನ ತಪ್ಪನ್ನು ಅರಿತುಕೊಂಡನು ಮತ್ತು ತಕ್ಷಣವೇ ತನ್ನ ಇನ್ಸ್ಟಾಗ್ರಾಮ್ ಪೋಸ್ಟ್ ಅನ್ನು ಅಳಿಸಿದನು. ಪೊಲೀಸರು ಘಟನೆಯ ಬಗ್ಗೆ ಯುವಕನ ಕುಟುಂಬಕ್ಕೆ ಮಾಹಿತಿ ನೀಡಿ ಯುವಕನನ್ನು ಮನೆಗೆ ಕಳುಹಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net