ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಪರೇಡ್‌ನಲ್ಲಿ ಭಾಗವಹಿಸಬೇಕು: ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚನೆ

Dayanand B
Published on

ಬೆಂಗಳೂರು: ಪರೇಡ್‌ಗಳು ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿದ್ದು, ಹೀಗಾಗಿ ಎಲ್ಲಾ ಪೊಲೀಸ್ ಸಿಬ್ಬಂದಿ ಕಡ್ಡಾಯವಾಗಿ ಪರೇಡ್‌ನಲ್ಲಿ ಭಾಗವಹಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೂಚಿಸಿದ್ದಾರೆ.
ನಗರದ ಆಡುಗೋಡಿಯ ಸಿಎಆರ್ ಕವಾಯತು ಮೈದಾನಲ್ಲಿ ಶುಕ್ರವಾರ ನಡೆದ ಮಾಸಿಕ ಕವಾಯತಿನಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಪರೇಡ್‌ಗಳಲ್ಲಿ ಭಾಗವಹಿಸುವುದರಿಂದ ಡ್ರಿಲ್, ಶಿಸ್ತು, ಕಮಾಂಡ್, ಕಂಟ್ರೋಲ್ ಎಲ್ಲಾ ಅಂಶಗಳು ರೂಢಿಗತವಾಗುತ್ತದೆ. ಪೊಲೀಸರು ಎಷ್ಟೇ ಕರ್ತವ್ಯದ ಒತ್ತಡವಿದ್ದರೂ ಪರೇಡ್‌ಗಳಲ್ಲಿ ಭಾಗವಹಿಸಬೇಕು. ಈ ಸಂಬಂಧ ಈಗಾಗಲೇ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚಿಸಿದ್ದೇನೆ ಎಂದು ಹೇಳಿದರು.
ಇತ್ತೀಚೆಗೆ ನಾನು ಗಮನಿಸಿದಂತೆ ಕೆಲ ಪೊಲೀಸ್ ಸಿಬ್ಬಂದಿಗೆ ಡ್ರಿಲ್ ಮತ್ತು ಸೆಲ್ಯೂಟ್ ಮಾಡಲು ಬರುತ್ತಿಲ್ಲ. ಇದು ಪೊಲೀಸ್ ಇಲಾಖೆಯಲ್ಲಿ ಒಳ್ಳೆಯ ವರ್ತನೆಯಲ್ಲ. ಹೀಗಾಗಿ ಈ ಪರೇಡ್‌ಗಳಲ್ಲಿ ಕೋರ್ಟ್, ವಾರೆಂಟ್, ಸಮನ್ಸ್, ಕ್ರೈಂ, ಗನ್ ಮ್ಯಾನ್ ಹಾಗೂ ಇತರೆ ವಿಶೇಷ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಪರೇಡ್ ಹಾಜರಾತಿಯನ್ನು ಸರಿಯಾಗಿ ಪಾಲಿಸಬೇಕು. ಇದನ್ನು ಸಂಬಂಧಪಟ್ಟ ಡಿಸಿಪಿಗಳು ಪರಿಶೀಲಿಸಬೇಕು ಎಂದು ಸೂಚಿಸಿದರು.
ಅಪರಾಧ ಪ್ರಕರಣಗಳು ಇಳಿಕೆ:
ಪೊಲೀಸರ ವೃತ್ತಿಪರತೆ ಈಗ ಹೆಚ್ಚಾಗಿದೆ. ಕಳೆದ ವರ್ಷಗಳಿಗೆ ಹೋಲಿಸಿದರೆ ಈ ವರ್ಷದಲ್ಲಿ ಮನೆ ಕಳ್ಳತನ, ದ್ವಿಚಕ್ರ ವಾಹನ ಕಳ್ಳತನ, ಸರಗಳ್ಳತನ ಸೇರಿ ಹಲವು ಅಪರಾಧ ಪ್ರಕರಣಗಳು ನಿಯಂತ್ರಣದಲ್ಲಿವೆ. ಕೆಲವು ಪ್ರಕರಣಗಳನ್ನು ಭೇದಿಸುವಲ್ಲಿ ನಮ್ಮ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಕಳೆದ ತಿಂಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದ ವಿವಿಧ ಶ್ರೇಣಿಯ ೮೫ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net