

ರಾಣೆಬೆನ್ನೂರ: ಕರೊನಾ ಲಾಕ್‌ಡೌನ್ ನಡುವೆಯೇ ಗ್ರಾಮಸ್ಥರು ಸೇರಿ ಗ್ರಾಮೀಣ ಠಾಣೆ ಸಿಪಿಐ ಅವರ ಜನ್ಮದಿನ ಆಚರಿಸಿದ್ದು ಇದೀಗ ವಿವಾದವಾಗಿ ಮಾರ್ಪಟ್ಟಿದೆ.
ಇದಕ್ಕೆ ಆಸ್ಪದ ನೀಡಿದ ಅಧಿಕಾರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ತಾಲೂಕಿನ ಮೇಡ್ಲೇರಿ ಗ್ರಾಮದ ಕೆಲವರು ದಾವಣಗೆರೆ ಐಜಿಪಿಗೆ ದೂರು ನೀಡಿದ್ದಾರೆ.
‘‘ಐದು ದಿನದ ಹಿಂದೆ ಗ್ರಾಮೀಣ ಠಾಣೆ ಸಿಪಿಐ ಸುರೇಶ ಎಂಬುವರು ಗ್ರಾಮದಲ್ಲಿ ಜನರ ಮಧ್ಯೆ ಸೇರಿ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಸಮಯದಲ್ಲಿ ಹಲವಾರು ಜನ ಸೇರಿ ಕೇಕ್ ಕತ್ತರಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ. ಆದ್ದರಿಂದ ಇವರ ಮೇಲೆ ಕಾನೂನು ಕ್ರಮ ಜರುಗಿಸಬೇಕು’’ ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಹಾವೇರಿ ಎಸ್ಪಿ ಕೆ.ಜಿ. ದೇವರಾಜು, ‘‘ಜನ್ಮದಿನ ಆಚರಿಸಿದ ವಿಷಯ ಗಮನಕ್ಕೆ ಬಂದಿದೆ. ರೂಟ್ ಮಾರ್ಚ್ ಮಾಡಲೆಂದು ಮೆಡ್ಲೇರಿ ಗ್ರಾಮದಿಂದ ಹೋಗುತ್ತಿದ್ದಾಗ ಸಿಪಿಐಗೆ ಪರಿಚಯವಿರುವ ಗ್ರಾಮದ ಕೆಲವರು ಅನಿರೀಕ್ಷಿತವಾಗಿ ಜನ್ಮ ದಿನ ಆಚರಿಸಿದ್ದಾರೆ. ಇದು ಪೂರ್ವನಿಯೋಜಿತವಲ್ಲ. ಆದರೂ ಈ ಕುರಿತು ಸೂಕ್ತ ತನಿಖೆ ಮಾಡಿ ವರದಿ ಸಲ್ಲಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’’ ಎಂದಿದ್ದಾರೆ.
ಗ್ರಾಮೀಣ ಠಾಣೆ ಸಿಪಿಐ ಸುರೇಶ ಸಗರಿ, ‘‘ಜನ್ಮದಿನವನ್ನು ನಾನು ಆಚರಿಸಿಕೊಂಡಿಲ್ಲ. ಗ್ರಾಮದಲ್ಲಿ ರೂಟ್ ಮಾರ್ಚ್ ಮುಗಿದ ಬಳಿಕ ಪರಿಚಯಸ್ಥರು ನೀರು ಕುಡಿಯಲು ಬನ್ನಿ ಎಂದು ಗ್ರಾಪಂ ಬಳಿ ಕರೆದುಕೊಂಡು ಹೋಗಿ ಜನ್ಮದಿನದ ಶುಭಾಶಯ ತಿಳಿಸಿ, ಕೇಕ್ ಕತ್ತರಿಸಲು ಒತ್ತಾಯ ಮಾಡಿದರು. ಕೇಕ್ ಕತ್ತರಿಸದಿದ್ದರೆ, ನಮ್ಮ ಗ್ರಾಮಕ್ಕೆ ಅವಮಾನ ಮಾಡಿದಂತೆ ಎಂದು ಒತ್ತಾಯ ಮಾಡಿದರು. ಹೀಗಾಗಿ ಕೇಕ್ ಕತ್ತರಿಸಿ ಆ ಕ್ಷಣವೇ ಅಲ್ಲಿಂದ ಹೊರಟು ಬಂದಿದ್ದೇನೆ’’ ಎಂದು ಸ್ಪಷ್ಟನೆ ನೀಡಿದ್ದಾರೆ.