

ನಿಜಾಮಾಬಾದ್: ನವೆಂಬರ್ 25ರಂದು ತೆಲಂಗಾಣದ ಕಾಮರೆಡ್ಡಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗೆ ಸಂಬಂಧಿಸಿದ ಬ್ಯಾಂಕ್ ಲಾಕರ್ ತೆರೆದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳಿಗೆ 34,40,200 ರೂ. ನಗದು ಮತ್ತು 9,12,800 ರೂ. ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.
ಇನ್ಸ್ಪೆಕ್ಟರ್ ಐ. ಜಗದೀಶ್ರನ್ನು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರ ಅಡಿಯಲ್ಲಿ ಎಸಿಬಿ ಅಧಿಕಾರಿಗಳು ನ. 21ರಂದು ಬಂಧಿಸಿದ್ದರು. ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು 5 ಲಕ್ಷ ರೂ. ಲಂಚ ತೆಗೆದುಕೊಂಡಿರುವ ಆರೋಪದಲ್ಲಿ ಜಗದೀಶ್ರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಎಸಿಬಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದಾಗ ಇನ್ಸ್ಪೆಕ್ಟರ್ ಅಕ್ರಮವಾಗಿ ಸಂಪಾದಿಸಿದ್ದ ಹಣ ಪತ್ತೆಯಾಗಿದೆ.
ನ.8 ರಂದು ತೆಲಂಗಾಣ ಸರ್ಕಾರದ ಗೇಮಿಂಗ್ ಕಾಯ್ದೆ ಅಡಿಯಲ್ಲಿ ಬಥುಲಾ ಸುಧಾಕರ್ ಎಂಬಾತನ ವಿರುದ್ಧ ಕಾಮರೆಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಂಧನವಾದ ದಿನದಂದೇ ಸುಧಾಕರ್ ಬಿಡುಗಡೆಯಾಗಿದ್ದ. ಇದು ಲಂಚದ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಮಾಹಿತಿ ಪಡೆದು ತನಿಖೆ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಲಂಚಬಾಕ ಇನ್ಸ್ಪೆಕ್ಟರ್ ಸಿಕ್ಕಿಬಿದ್ದಿದ್ದಾನೆ.
ಸರ್ಕಾರಿ ಕೆಲಸವನ್ನು ಸ್ವಾರ್ಥ ಸಾಧನೆಗಾಗಿ ಬಳಸಿಕೊಂಡು ಕರ್ತವ್ಯಕ್ಕೆ ಇನ್ಸ್ಪೆಕ್ಟರ್ ಜಗದೀಶ್ ಮೋಸವೆಸಗಿದ್ದಾನೆ. ಜಗದೀಶ್ ಪ್ರಕರಣಕ್ಕೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಜಗದೀಶ್ ಮತ್ತು ಆತನ ಪತ್ನಿ ಕಮಲೇಶ್ವರದಲ್ಲಿರುವ ಆ್ಯಕ್ಸಿಕ್ ಬ್ಯಾಂಕ್ ಲಾಕರ್ ಉಪಯೋಗಿಸುತ್ತಿದ್ದರು ಎಂಬ ವಿಚಾರ ತನಿಖೆಯ ವೇಳೆ ಬಯಲಾದಾಗ, ಬ್ಯಾಂಕ್ಗೆ ಭೇಟಿ ನೀಡಿ ಲಾಕರ್ ತೆರೆದಾಗ ಎಸಿಬಿ ಅಧಿಕಾರಿಗಳಿಗೆ ನಗದು ಮತ್ತು ಚಿನ್ನಾಭರಣ ಸಿಕ್ಕಿದೆ. ಸದ್ಯ ವಿಚಾರಣೆ ಮುಂದುವರಿದಿದೆ. (ಏಜೆನ್ಸೀಸ್)