ರಾಜ್ಯಪಾಲರಿಗೆ ದೂರು ಕೊಟ್ಟ ಬಿಬಿಎಂಪಿ ಗುತ್ತಿಗೆದಾರರಿಗೆ ಪೊಲೀಸ್ ವಿಚಾರಣೆ ಬಿಸಿ

BBMP
Published on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಸಿದ ಕಾಮಗಾರಿಗಳ ಬಾಕಿ ಹಣ ಬಿಡುಗಡೆಗೆ ಕಮಿಷನ್‌ಗೆ ಬೇಡಿಕೆ ಒಡ್ಡಿದ್ದ ಆರೋಪದ ಮೇಲೆ ರಾಜ್ಯಪಾಲರಿಗೆ ದೂರು ನೀಡಿದ್ದ ಬಿಬಿಎಂಪಿ ಗುತ್ತಿಗೆದಾರರಿಗೆ ನೋಟಿಸ್ ಕೊಟ್ಟು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರುನಗರ ಅಭಿವೃದ್ಧಿ ಸಚಿವರ ಹೆಸರಿನಲ್ಲಿ ಶೇ.10 ರಿಂದ 15 ರಷ್ಟು ಕಮಿಷನ್ ಕೇಳುತ್ತಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡಿಸಿಕೊಡುವಂತೆ ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ರಾಜ್ಯಪಾಲರಿಗೆ ಗುತ್ತಿಗೆದಾರರು ದೂರು ಸಲ್ಲಿಸಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಬಿಎಂಪಿ ಹೆಚ್ಚುವರಿ ಆಯುಕ್ತರು(ಹಣಕಾಸು) ಕಾಮಗಾರಿಗಳ ಹಣ ಬಿಡುಗಡೆ ತಮ್ಮಮೇಲೆ ಗುತ್ತಿಗೆದಾರರು ಬಾಹ್ಯ ಒತ್ತಡ ಏರುತ್ತಿದ್ದಾರೆ ಎಂದು ಆರೋಪಿಸಿ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸಗೌಡ ಮತ್ತು ಹೈಗ್ರೌಂಡ್ಸ್ ಠಾಣೆಗೆ ಪ್ರತ್ಯೇಕ ದೂರು ನೀಡಿದ್ದರು. ಅದರಲ್ಲಿ ರಾಜ್ಯಪಾಲರಿಗೆ ಸಲ್ಲಿಸಿದ್ದ ದೂರಿನ ಪ್ರತಿ ಲಗತ್ತಿಸಿದ್ದರು.

ಇದರ ಮೇರೆಗೆ ಶೇಷಾದ್ರಿಪುರ ಉಪ ವಿಭಾಗದ ಎಸಿಪಿ ಪ್ರಕಾಶ್ ರೆಡ್ಡಿ, ರಾಜ್ಯಪಾಲರಿಗೆ ಸಲ್ಲಿಸಿದ್ದ ದೂರಿನ ಪ್ರತಿಗೆ ಸಹಿ ಮಾಡಿದ್ದ 57 ಗುತ್ತಿಗೆದಾರರಿಗೆ ನೋಟಿಸ್ ಜಾರಿ ಮಾಡಿದ್ದರು. ಗುರುವಾರ ವಿಚಾರಣೆಗೆ ಹಾಜರಾಗಿದ್ದ 16 ಬಿಬಿಎಂಪಿ ಗುತ್ತಿಗೆದಾರರನ್ನು ಪ್ರಶ್ನಿಸಿ ಎಸಿಪಿ ಪ್ರಕಾಶ್ ರೆಡ್ಡಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಮತ್ತೆ ಇನ್ನುಳಿದ ಗುತ್ತಿಗೆದಾರರ ವಿಚಾರಣೆ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಚಾರಣೆ ವೇಳೆ 2 ವರ್ಷಗಳ ಅವಧಿಯಲ್ಲಿ ತಾವು ಕೈಗೊಂಡಿದ್ದ ಕಾಮಗಾರಿಗಳ ಬಗ್ಗೆ ಪೊಲೀಸರಿಗೆ ಗುತ್ತಿಗೆದಾರರು ದಾಖಲೆ ಸಲ್ಲಿಸಿದ್ದಾರೆ. ಕಮಿಷನ್ ಆರೋಪ ಕುರಿತು ಸೂಕ್ತ ಪುರಾವೆಗಳನ್ನು ಗುತ್ತಿಗೆದಾರರು ಸಲ್ಲಿಸಿಲ್ಲ. ಕೆಲವರು ತಾವು ಕಮಿಷನ್ ಆರೋಪವನ್ನೇ ಮಾಡಿಲ್ಲ ಎಂದು ಸಮಜಾಯಿಷಿ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net