Bihar police firing protest: ಪೊಲೀಸರ ಗುಂಡಿನ ಚಕಮಕಿಗೆ ಗ್ರಾಮಸ್ಥನೊಬ್ಬ ಮೃತಪಟ್ಟ ಘಟನೆಯನ್ನು ಖಂಡಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ, ಸಂತ್ರಸ್ತ ಕುಟುಂಬದ ಮಹಿಳೆಯೊಬ್ಬರು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಅವರ ಕಾಲರ್ ಹಿಡಿದು ಎಳೆದ ಘಟನೆ ಬಿಹಾರದ ಮಧುಬನಿ ಜಿಲ್ಲೆಯಲ್ಲಿ ನಡೆದಿದೆ.
ಬಿಹಾರದ ಮಧುಬನಿ ಜಿಲ್ಲೆಯ ಬಾಬೂಬರಹಿ ಪೊಲೀಸ್ ಠಾಣಾ ವ್ಯಾಪ್ತಿಯ ಬಲಿರಾಜಗಢ ಮತ್ತು ಖೋಜಪುರ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ನವೆಂಬರ್ 2ರ ಸೋಮವಾರ ತಡರಾತ್ರಿ ಪೊಲೀಸ್ ಪಿಕೇಟ್‌ನಲ್ಲಿ ನಿಯೋಜನೆಗೊಂಡಿದ್ದ ಎಎಸ್‌ಐ (ASI) ಚಂದ್ರಮೋಹನ್ ಸಿಂಗ್ ನಡೆಸಿದ ಗುಂಡಿನ ಚಕಮಕಿಯಲ್ಲಿ ಒಬ್ಬ ಗ್ರಾಮಸ್ಥ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು.
ಪೊಲೀಸರ ಈ ಬೇಜವಾಬ್ದಾರಿ ವರ್ತನೆಗೆ ಕಡೆಗೂ ಗ್ರಾಮಸ್ಥರು ರೊಚ್ಚಿಗೆದ್ದಿದ್ದಾರೆ. ಮೃತರ ದೇಹವನ್ನು ರಸ್ತೆ ಮಧ್ಯೆ ಇರಿಸಿ ನವೆಂಬರ್ 3ರಂದು ಖೋಜಪುರದಲ್ಲಿ ಬೃಹತ್ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಪರಿಣಾಮ ಸ್ಥಳದಲ್ಲಿ ತೀವ್ರ ಬಿಗುವಿನ ವಾತಾವರಣ ಉಂಟಾಗಿತ್ತು.
ಪರಿಸ್ಥಿತಿಯನ್ನು ತಿಳಿಗೊಳಿಸಲು ಮತ್ತು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಮಧುಬನಿ ಜಿಲ್ಲಾಧಿಕಾರಿ (DM) ಆನಂದ್ ಶರ್ಮಾ ಹಾಗೂ ಎಸ್‌ಪಿ ಯೋಗೇಂದ್ರ ಕುಮಾರ್ ಸ್ಥಳಕ್ಕೆ ಬಂದಿದ್ದರು. ಈ ವೇಳೆ ಆಕ್ರೋಶಗೊಂಡ ಜನಸಮೂಹವು ಅಧಿಕಾರಿಗಳನ್ನು ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿತು. ಗದ್ದಲ ಮತ್ತು ತಳ್ಳಾಟದ ಈ ನೂಕುನುಗ್ಗಲಿನಲ್ಲಿ, ಮೃತರ ಕುಟುಂಬದ ಮಹಿಳೆಯೊಬ್ಬರು ಆಕ್ರೋಶದಿಂದ ಜಿಲ್ಲಾಧಿಕಾರಿ ಆನಂದ್ ಶರ್ಮಾ ಶರ್ಟ್ ಕಾಲರ್ ಹಿಡಿದು ಎಳೆದರು.
ಆಕ್ರೋಶದದಲ್ಲಿ ಜನ ತಮ್ಮ ಮೇಲೆ ಕೈಮಾಡಿದರೂ, ಜಿಲ್ಲಾಧಿಕಾರಿ ಆನಂದ್ ಶರ್ಮಾ ತಮ್ಮ ತಾಳ್ಮೆ ಕಾಯ್ದುಕೊಂಡರು. ಜನರ ನೋವು, ಕೋಪವನ್ನು ಅರ್ಥಮಾಡಿಕೊಂಡು ಸಂಯಮದಿಂದಲೇ ಪರಿಸ್ಥಿತಿಯನ್ನು ನಿಭಾಯಿಸಿದ ಅವರ ವೃತ್ತಿಪರತೆಗೆ ಈಗ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.