ನಡುರಸ್ತೆಯಲ್ಲೇ ಕೈಕೈ ಮಿಲಾಯಿಸಿದ ಪೊಲೀಸರು! ಜಗಳ ಬಿಡಿಸಲು ಹೋದ ಜನರಿಗೆ ಕಾದಿತ್ತು ಶಾಕ್​

Police Constable
Published on

ವಿಜಯವಾಡ: ಜನರಿಗೆ ಭದ್ರತೆ ಮತ್ತು ರಕ್ಷಣೆ ನೀಡುವ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಿಗೆ ಅಪಾರ ಗೌರವವಿದೆ. ಬಿಸಿಲು, ಮಳೆ ಹಾಗೂ ಚಳಿಯನ್ನು ಲೆಕ್ಕಿಸದೇ ದಿನದ 24 ಗಂಟೆಗಳ ಕಾಲ ಕರ್ತವ್ಯ ನಿರ್ವಹಿಸುತ್ತಾರೆ ಮತ್ತು ಜನರಿಗೆ ಸದಾ ಲಭ್ಯವಿರುತ್ತಾರೆ. ಯಾವುದೇ ಅಪಾಯ ಅಥವಾ ಅನ್ಯಾಯದ ಸಂದರ್ಭಗಳಲ್ಲಿ ಜನರ ಮನಸ್ಸಿಗೆ ಮೊದಲು ನೆನಪಿಗೆ ಬರುವವರೆಂದರೆ ಅವರು ಪೊಲೀಸರು. ಕೆಲವೊಮ್ಮೆ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಇನ್ನೊಬ್ಬರ ಜೀವ ಉಳಿಸುತ್ತಾರೆ. ಇದಿಷ್ಟು ಒಂದು ಕಡೆಯಾದರೆ ತಮ್ಮ ದುರ್ನಡತೆಯಿಂದ ಕೆಲವೊಮ್ಮೆ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಇಬ್ಬರು ಪೊಲೀಸರು ರಸ್ತೆಯಲ್ಲಿ ಹೊಡೆದಾಡಿಕೊಂಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇಬ್ಬರು ಕಾನ್ಸ್​ಟೆಬಲ್​ಗಳು ನಡುರಸ್ತೆಯಲ್ಲೇ ಬಡಿದಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ರೋಲಾ ಮಂಡಲದಲ್ಲಿ ನಡೆದಿದೆ. ರೋಲಾ ಮತ್ತು ಅಗಲಿ ಪೊಲೀಸ್ ಠಾಣೆಯ ಶಿವಕುಮಾರ್ ಮತ್ತು ನಾರಾಯಣಸ್ವಾಮಿ ನಾಯ್ಕ್ ಹೆಸರಿನ ಇಬ್ಬರು ಕಾನ್‌ಸ್ಟೆಬಲ್​ಗಳನ್ನು ಚುನಾವಣೆಯ ಕರ್ತವ್ಯಕ್ಕೆಂದು ಪಿಲ್ಲಿಗುಂಡ್ಲು ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿತ್ತು. ಈ ವೇಳೆ ಇಬ್ಬರು ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸಂಜೆ ಡ್ಯೂಟಿ ಶಿಫ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಕಿತ್ತಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಾಳ್ಮೆ ಕಳೆದುಕೊಂಡ ಇಬ್ಬರು ಕಾನ್ಸ್​ಟೆಬಲ್​ಗಳು ಸಮವಸ್ತ್ರದಲ್ಲೇ ಕಿತ್ತಾಡಿಕೊಂಡಿದ್ದಾರೆ. ಜನರು ನಮ್ಮನ್ನೇ ನೋಡುತ್ತಿದ್ದಾರೆ ಎಂಬ ಅರಿವು ಇಲ್ಲದಂತೆ ಒಬ್ಬರ ಮೇಲೆ ಒಬ್ಬರು ಹಲ್ಲೆ ನಡೆಸಿದ್ದಾರೆ. ಜಗಳ ನಿಲ್ಲಿಸಲು ಬಂದ ಜನರನ್ನೇ ದೂರ ತಳ್ಳಿದ ಪೇದೆಗಳು ಬಡಿದಾಟದಲ್ಲೇ ಮುಳುಗಿದರು. ಇಡೀ ದೃಶ್ಯವನ್ನು ಸ್ಥಳದಲ್ಲಿದ್ದವರು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದೆ.

ಕರ್ತವ್ಯ ನಿರ್ವಹಿಸಬೇಕಾದ ಪೊಲೀಸರೇ ಈ ರೀತಿಯ ಒದೆದಾಡಿಕೊಂಡಿರುವುದು ಚರ್ಚೆಗೆ ಗುರಿಯಾಗಿದೆ. ಸಾರ್ವಜನಿಕವಾಗಿ ಈ ರೀತಿ ಜಗಳ ಮಾಡುವುದು ಸರಿಯೇ? ಈ ರೀತಿ ವರ್ತಿಸಿದರೆ ಶಾಂತಿ ಹಾಗೂ ಭದ್ರತೆಗೆ ಭಂಗ ಉಂಟಾಗುವುದಲ್ಲವೇ ಎಂದು ಕಾನ್ಸ್​ಟೆಬಲ್​ಗಳ ವರ್ತನೆಯನ್ನು ಖಂಡಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net