

ಶಿವಮೊಗ್ಗ: ರಾಜಕಾರಣಿಗಳು ಹಾಗೂ ಮಾಧ್ಯಮದವರಿಂದ ಪೊಲೀಸರು ಸದಾ ಟೀಕೆಗೆ ಒಳಗಾಗುತ್ತಾರೆ. ಇಂತಹ ಟೀಕೆಗಳಿಂದ ಪೊಲೀಸರು ಉತ್ಸಾಹ ಕಳೆದುಕೊಳ್ಳದೆ ಶಾಂತಿ ಕಾಪಾಡುವ ಕರ್ತವ್ಯ ಮುಂದುವರಿಸಲಿ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ ಹೇಳಿದರು.
ಡಿಎಆರ್ ಮೈದಾನದಲ್ಲಿ ಸೋಮವಾರ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಹುತಾತ್ಮ ಪೊಲೀಸರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಪೊಲೀಸರ ಸೇವೆ ಅಮೂಲ್ಯ. ಕರ್ತವ್ಯದಲ್ಲಿ ಅವರ ಬದ್ಧತೆಯನ್ನು ಪ್ರಶ್ನಿಸುವಂತಿಲ್ಲ. ಕೆಲಸದ ವೇಳೆ ಹುತಾತ್ಮರಾದ ಪೊಲೀಸರನ್ನು ಸ್ಮರಿಸುವುದು ಸಮಾಜದ ಕರ್ತವ್ಯ ಎಂದರು.
ಅಂಕಿ ಅಂಶಗಳ ಪ್ರಕಾರ ನಮ್ಮ ದೇಶದಲ್ಲಿ ಸೈನಿಕರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಹುತಾತ್ಮರಾಗಿದ್ದಾರೆ. ಪೊಲೀಸರ ಕಾರ್ಯ ಎಷ್ಟು ಕಠಿಣ ಎಂಬುದು ಇದರಿಂದಲೇ ಮನದಟ್ಟಾಗುತ್ತದೆ. ಪೊಲೀಸರು ಸದಾ ಒತ್ತಡದಲ್ಲೇ ಕಾರ್ಯನಿರ್ವಹಿಸಬೇಕಾಗುತ್ತದೆ. ಪೊಲೀಸರು ಉತ್ತಮ ಕಾರ್ಯ ನಿರ್ವಹಿಸುವುದರಿಂದ ಸಮಾಜ ಸ್ವಸ್ಥವಾಗಿರುತ್ತದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ತುಂಬ ಚೆನ್ನಾಗಿದೆ. ಇದರಲ್ಲಿ ಜಿಲ್ಲೆಯ ಪೊಲೀಸರ ಕಠಿಣ ಪರಿಶ್ರಮ ಮುಖ್ಯವಾದುದು. ಪೊಲೀಸರು ಸಮಾಜದ ಎಲ್ಲ ಸ್ತರಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಅನೇಕ ಬಾರಿ ನ್ಯಾಯಾಧೀಶರಂತೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದರು.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹುತಾತ್ಮರ ಪಟ್ಟಿ ಓದಿದರು. ಜಿಪಂ ಸಿಇಒ ಎನ್.ಹೇಮಂತ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಉಪಸ್ಥಿತರಿದ್ದರು.