

ನವದೆಹಲಿ: ರಾಜ್ಯದಲ್ಲಿ ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ಸದ್ದು ಮಾಡುತ್ತಿದ್ದರೆ ದೇಶದಲ್ಲಿ ಹನುಮಾನ್ ಚಾಲೀಸ ಸುದ್ದಿಯಾಗುತ್ತಿದೆ. ಮಸೀದಿಗಳಲ್ಲಿ ಧ್ವನಿವರ್ಧಕದ ಮೂಲಕ ಆಜಾನ್ ಕೂಗುತ್ತಿರುವುದರ ವಿರುದ್ಧ ಕಳೆದ ಕೆಲವು ದಿನಗಳಿಂದ ದೇಶದ ವಿವಿಧೆಡೆ ಹನುಮಾನ್ ಚಾಲೀಸ ಅಭಿಯಾನ ನಡೆಯುತ್ತಿದ್ದು, ಅದನ್ನು ಇಂದು ಕುತುಬ್ ಮಿನಾರ್ ಬಳಿಯೂ ನಡೆಸಲು ಯತ್ನಿಸಲಾಗಿದೆ.
ರಾಷ್ಟ್ರದ ರಾಜಧಾನಿಯಲ್ಲಿರುವ ಐತಿಹಾಸಿಕ ಹಾಗೂ ವಿಶ್ವ ಪಾರಂಪರಿಕ ತಾಣವಾದ ಕುತುಬ್ ಮಿನಾರ್ ಬಳಿ ಹಿಂದು ಸಂಘಟನೆಯವರೆನ್ನಲಾದ ಸುಮಾರು ಐವತ್ತು ಮಂದಿ ಜಮಾಯಿಸಿ, ಹುನುಮಾನ್ ಚಾಲೀಸ ಪಠನ ಮಾಡುವುದಾಗಿ ಹೇಳಿಕೊಂಡಿದ್ದರು.
ಯುನೈಟೆಡ್ ಹಿಂದೂ ಫ್ರಂಟ್ (ಯುಎಚ್ಎಫ್) ಕಾರ್ಯಾಧ್ಯಕ್ಷ ಜೈ ಭಗವಾನ್ ಗೋಯಲ್ ಕರೆ ಮೇರೆಗೆ ಈ ಕಾರ್ಯಕರ್ತರು ಹನುಮಾನ್ ಚಾಲೀಸ ಪಠನಕ್ಕಾಗಿ ಕುತುಬ್ ಮಿನಾರ್ ಬಳಿ ಜಮಾಯಿಸಿದ್ದರು.
ಹೀಗೆ ಹನುಮಾನ್ ಚಾಲೀಸ ಪಠನಕ್ಕಾಗಿ ಜಮಾಯಿಸಿದ್ದವರೆಲ್ಲ ಯುನೈಟೆಡ್ ಹಿಂದೂ ಫ್ರಂಟ್ ಮತ್ತು ರಾಷ್ಟ್ರವಾದಿ ಶಿವಸೇನಾ ಕಾರ್ಯಕರ್ತರು ಎನ್ನಲಾಗಿದ್ದು, ಆ ಪೈಕಿ 44 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ದಕ್ಷಿಣ ದೆಹಲಿಯ ಡಿಸಿಪಿ ಬೆನಿಟಾ ಮೇರಿ ಜೈಕರ್ ತಿಳಿಸಿದ್ದಾರೆ.