ಸಮಾಜಘಾತುಶಕ್ತಿಗಳ ನಿಯಂತ್ರಣಕ್ಕೆ ಪೊಲೀಸರ ಸಮನ್ವಯತೆ ಅಗತ್ಯ; ಸಿಎಂ ಸಿದ್ದರಾಮಯ್ಯ ಅಭಿಪ್ರಾಯ

CM
Published on

ಬೆಂಗಳೂರು: ಭಯೋತ್ಪಾದಕ, ಡ್ರಗ್ಸ್ ಜಾಲ ಮತ್ತು ಸೈಬರ್ ಕ್ರೈಂ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳ ಪೊಲೀಸರು ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಪಂಚಾತಾರಾ ಹೋಟೆಲ್‌ನಲ್ಲಿ ರಾಜ್ಯ ಪೊಲೀಸ್ ಇಲಾಖೆ ಬುಧವಾರ ಆಯೋಜಿಸಿದ್ದ ದಕ್ಷಿಣ ಭಾರತದ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ(ಡಿಜಿಪಿ) ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಭಯೋತ್ಪಾದನೆ ಬಹುಮುಖ್ಯ ಮೂಲಭೂತ ಸಮಸ್ಯೆಯಾಗಿದೆ. ಮಾದಕ ವಸ್ತು ಜಾಲವು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಗಡಿದಾಟಿ ವಿಸ್ತರಿಸಿಕೊಂಡು ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿವೆ. ಇಂತಹ ಸಮಾಜಘಾತುಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ರಾಜ್ಯ ರಾಜ್ಯಗಳ ಪೊಲೀಸರ ನಡುವೆ ಸಮನ್ವಯತೆ ಅಗತ್ಯವಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಪೊಲೀಸರ ಮಧ್ಯೆ ಸೌಹಾರ್ದಯುತ ಹೊಂದಾಣಿಕೆಯ ಸಂಬಂಧವಿದೆ. ಅಂತರ್ ರಾಜ್ಯ ಕ್ರಿಮಿನಲ್ ಗ್ಯಾಂಗ್‌ಗಳನ್ನು ಹತ್ತಿಕ್ಕಲು ರಾಜ್ಯಗಳು ಪರಸ್ಪರ ಕೈ ಜೋಡಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಸಿಎಂ ಹೇಳಿದರು.

ಸೈಬರ್ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಡಿಜಿಟಲ್ ಸಾಕ್ಷ್ಯ ಸಂಗ್ರಹ ಪರಿಣಾಮಕಾರಿಯಾಗಿ ಮಾಡಬೇಕಿದೆ. ಸೈಬರ್ ವಂಚಕರಿಗೂ ಒಂದು ಹೆಜ್ಜೆ ಮುಂದಿಟ್ಟು ಪೊಲೀಸರು ಕರ್ತವ್ಯ ನಿರ್ವಹಿಸಬೇಕು. ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಪ್ರತಿ ಜಿಲ್ಲೆಯಲ್ಲಿ ಸೈಬರ್, ಆರ್ಥಿಕ, ಮಾದಕ ವಸ್ತು (ಸಿಇಎನ್) ಠಾಣೆಗಳನ್ನು ಸ್ಥಾಪಿಸಿದೆ. ಸಿಇಎನ್ ಠಾಣೆಗಳ ಪೊಲೀಸರಿಗೆ ಸೈಬರ್ ತಜ್ಞರಿಂದ ತರಬೇತಿ ಸಹ ನೀಡಲಾಗಿದೆ. ಸೈಬರ್ ಅಪರಾಧಿಗಳ ಮೇಲೆ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ರಾಜ್ಯ ಪೊಲೀಸ್ ಇಲಾಖೆಯ ಬಲವರ್ಧನೆಗೆ ಸರ್ಕಾರವು ಪ್ರಾಮುಖ್ಯತೆ ನೀಡಿದೆ. ಬೆಂಗಳೂರಿನಲ್ಲಿ ಅತ್ಯಾಧುನಿಕ ಮಟ್ಟದ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಬಳ್ಳಾರಿ, ಹುಬ್ಬಳ್ಳಿ- ಧಾರವಾಡ ಹಾಗೂ ಆಯುಕ್ತರ ಮಟ್ಟದಲ್ಲಿ ಕೂಡಾ ಉತ್ತಮ ಮಟ್ಟದ ಎಫ್‌ಎಸ್‌ಎಲ್ ಘಟಕಗಳನ್ನು ತೆರೆಯಲಾಗಿದೆ. ಬಂದೀಖಾನೆ ವ್ಯವಸ್ಥೆ ಸುಧಾರಣೆ ಸಹ ಆಗತ್ಯವಿದೆ. ಇತ್ತೀಚೆಗೆ ಬೆಂಗಳೂರು ಪೊಲೀಸರು ಪತ್ತೆ ಹಚ್ಚಿದ ಉಗ್ರ ಕೃತ್ಯದಲ್ಲಿ ಜೈಲಿನಲ್ಲಿ ಇದ್ದುಕೊಂಡೇ ಆರೋಪಿಗಳು ಅಪರಾಧಕ್ಕೆ ಸಂಚು ರೂಪಿಸಿದ್ದರು. ಜೈಲುಗಳಲ್ಲಿ ಸುಧಾರಣಾ ವ್ಯವಸ್ಥೆ, ಪುನರ್‌ವಸತಿ, ಸಾಮಾಜಿಕ ಸ್ವಾಸ್ಥ್ಯದ ಕುರಿತು ಜೈಲುಬಂಧಿಗಳಿಗೆ ಮನವರಿಕೆ ಮಾಡಿಕೊಡಬೇಕು.

ಸಮಾವೇಶದಲ್ಲಿ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕೇರಳ, ಪಾಂಡಿಚೇರಿ, ಅಂಡಮಾನ್- ನಿಕೋಬಾರ್ ಮತ್ತು ಲಕ್ಷ ದ್ವೀಪಗಳ ಪೊಲೀಸ್ ಮಹಾನಿರ್ದೇಶಕರು, ಎನ್‌ಡಿಪಿಎಸ್ ಸೇರಿದಂತೆ ವಿವಿಧ ಕೇಂದ್ರ ತನಿಖಾ ಸಂಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಅಲೋಕ್ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.

ಭಾಷೆ, ಸಂಸ್ಕೃತಿ, ಭೌಗೋಳಿಕ ಗಡಿಗಳಿಲ್ಲದೆ ಎಲ್ಲ ರಾಜ್ಯಗಳ ಪೊಲೀಸರ ಸಹಕಾರದಿಂದ ಕೆಲಸ ಮಾಡಬೇಕು. ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಅಪರಾಧ ನಿಯಂತ್ರಣಕ್ಕೆ ಶ್ರಮಿಸಬೇಕು.

ಡಾ.ಜಿ. ಪರಮೇಶ್ವರ್-ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net