

ಹಾವೇರಿ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿಯೂ ಆಗಿರುವ ಅರುಣ್ ಸಿಂಗ್ ಕಾರನ್ನು ಅಡ್ಡಗಟ್ಟಿ ಕುಳಿತು ಪ್ರತಿಭಟನೆ ನಡೆಸಿದ ಪ್ರಸಂಗವೊಂದು ನಡೆದಿದೆ. ರಾಜ್ಯದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳು ಈ ರೀತಿ ಅರುಣ್ ಸಿಂಗ್ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾವೇರಿ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಈ ಪ್ರತಿಭಟನೆ ನಡೆದಿದೆ. ಜಿಲ್ಲಾ ಕೋರ್ ಕಮಿಟಿ ಸಭೆ ಮುಗಿಸಿದ ಬಳಿಕ ಅವರು ಹುಬ್ಬಳ್ಳಿಯತ್ತ ಹೊರಟಿದ್ದ ವೇಳೆ ಕಾರಿಗೆ ಅಡ್ಡಗಟ್ಟಿ ಕುಳಿತ ಪೊಲೀಸ್ ಕಾನ್ಸ್ಟೇಬಲ್ ಹುದ್ದೆ ಆಕಾಂಕ್ಷಿಗಳು ತಮ್ಮ ಸಮಸ್ಯೆ ಆಲಿಸುವಂತೆ ಪಟ್ಟು ಹಿಡಿದಿದ್ದಾರೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಹಾಗೂ ಬಿಜೆಪಿ ಶಾಸಕರು ಬಂದು ಸಮಾಧಾನಪಡಿಸಲು ಯತ್ನಿಸಿದರೂ ಇವರು ಕಾರಿನ ಮುಂಭಾಗದಿಂದ ಎದ್ದೇಳದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಬಳಿಕ ಕಾರಿನಿಂದ ಇಳಿದು ಬಂದ ಅರುಣ್ ಸಿಂಗ್, ಪೊಲೀಸ್ ಕಾನಸ್ಟೇಬಲ್ ಆಕಾಂಕ್ಷಿಗಳ ಸಮಸ್ಯೆ ಏನೆಂದು ಆಲಿಸಿದರು.
ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ರಾಜ್ಯಗಳಲ್ಲಿ ಇರುವಂತೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿ ವಯೋಮಿತಿಯನ್ನು ಕರ್ನಾಟಕದಲ್ಲಿ ಗರಿಷ್ಠ 38 ವರ್ಷಗಳವರೆಗೆ ಹೆಚ್ಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಮನವಿ ಸ್ವೀಕರಿಸಿದ ಅರುಣ್ ಸಿಂಗ್, ಈ ಬಗ್ಗೆ ಸಿಎಂ ಗಮನಕ್ಕೆ ತರುವುದಾಗಿ ಭರವಸೆ ನೀಡಿ ಹುಬ್ಬಳ್ಳಿಯತ್ತ ತೆರಳಿದರು.