ಮಧ್ಯೆ ಮಾತಾಡಬೇಡ ಎಂದಿದ್ದಕ್ಕೆ ಮಹಿಳಾ ಎಎಸ್​ಐ ಮೇಲೆ ಹಲ್ಲೆ ಮಾಡಿದ ಕಾನ್​ಸ್ಟೆಬಲ್​​!

Police Constable
Published on

ಗುರುಗ್ರಾಮ: ಮಧ್ಯೆ ಮಾತನಾಡಿ ಅಡ್ಡಿಪಡಿಸಬೇಡ ಎಂದಿದ್ದಕ್ಕೆ ಪೊಲೀಸ್​ ಕಾನ್​ಸ್ಟೆಬಲ್​​ ಓರ್ವ ತನಗಿಂತ ಹಿರಿಯ ಅಧಿಕಾರಿಯಾಗಿರುವ ಮಹಿಳಾ ಪೊಲೀಸ್​ ಸಬ್​​ ಇನ್ಸ್​ಪೆಕ್ಟರ್​ ಮೇಲೆ ಹಲ್ಲೆ ಮಾಡಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿರುವುದಾಗಿ ಪೊಲೀಸ್​ ಮೂಲಗಳು ಶುಕ್ರವಾರ ತಿಳಿಸಿವೆ.

ಗುರುಗ್ರಾಮದ ಸೆಕ್ಟರ್​ 37 ಪೊಲೀಸ್​ ಠಾಣೆಯ ಎಎಸ್​ಐ ಪೂನಂ ಮತ್ತು ಕಾನ್​ಸ್ಟೆಬಲ್​ ಪ್ರವೇಶ್​ ನಡುವೆ ಬುಧವಾರ ರಾತ್ರಿ ಗಲಾಟೆ ನಡೆದಿದೆ. ಅತ್ಯಾಚಾರ ಪ್ರಕರಣದ ದೂರುದಾರರ ಜತೆ ಮಾತನಾಡುವಾಗ ಮಧ್ಯ ಮಾತನಾಡಬೇಡ ಎಂದಿದ್ದಕ್ಕೆ ಎಎಸ್​ಐ ಮೇಲೆ ಕಾನ್​ಸ್ಟೇಬಲ್​ ಹಲ್ಲೆ ಮಾಡಿದ್ದಾರೆ.

ಕೊಲೆ ಬೆದರಿಕೆ

ಇಬ್ಬರ ನಡುವಿನ ಜಗಳ ಉಲ್ಬಣಗೊಂಡು, ಕಾನ್‌ಸ್ಟೆಬಲ್ ಪ್ರವೇಶ್​, ಎಎಸ್‌ಐಗೆ ಪೂನಂಗೆ ಕೊಲೆ ಬೆದರಿಕೆ ಸಹ ಹಾಕಿದರು. ಆದರೆ ಸ್ಥಳದಲ್ಲಿದ್ದ ಇತರ ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಜಗಳವನ್ನು ತಡೆದರು. ಘಟನೆಯ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ತಿಳಿದಾಗ, ಎಸಿಪಿ ಶ್ರೇಣಿಯ ಅಧಿಕಾರಿ ಪೊಲೀಸ್ ಠಾಣೆಗೆ ಆಗಮಿಸಿ ಇಬ್ಬರನ್ನು ವಿಚಾರಣೆಗೆ ಒಳಪಡಿಸಿದರು.

ಎಸ್​ಎಚ್​ಒ ವರ್ಗಾವಣೆ

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಸೆಕ್ಟರ್ 37 ಪೊಲೀಸ್ ಠಾಣೆಯ ಎಸ್‌ಎಚ್‌ಒ ಆಗಿದ್ದ ಇನ್‌ಸ್ಪೆಕ್ಟರ್ ಸುನೀತಾ ಅವರನ್ನು ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ ಮತ್ತು ಇನ್‌ಸ್ಪೆಕ್ಟರ್ ಅಮನ್ ಬೇನಿವಾಲ್ ಅವರನ್ನು ಎಸ್‌ಎಚ್‌ಒ ಆಗಿ ನೇಮಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೂರು ದಾಖಲು

ಗುರುವಾರ ಕಾನ್​ಸ್ಟೆಬಲ್​ ಪ್ರವೇಶ್ ವಿರುದ್ಧ ಎಎಸ್‌ಐ ಪೂನಂ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಸೆಕ್ಟರ್ 10 ಎ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಗಾಯ ಉಂಟುಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಹೆಚ್ಚಿನ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net