

ಘಾಜಿಯಾಬಾದ್: ತಾವು ಕೇಳಿದ ಹಾಡನ್ನು ಹಾಕಲು ಹಿಂದೇಟು ಹಾಕಿದ ಪಬ್ ವಿರುದ್ಧ ಗಲಾಟೆ ನಡೆಸಿದ ಮೂವರು ಮಹಿಳೆಯರ ಮೇಲೆ ಪಬ್ ಬೌನ್ಸರ್‌ಗಳು ಹಲ್ಲೆ ನಡೆಸಿರುವ ಘಟನೆ ಘಜಿಯಾಬಾದ್ನಲ್ಲಿ ವರದಿಯಾಗಿದೆ.
ಘಟನೆಯ ವಿವರ: ಪಬ್‌ನ ಡಿಜೆಗೆ ತಮಗೆ ಇಷ್ಟವಾದ ಹಾಡನ್ನು ಹಾಕಲು ಓರ್ವ ಮಹಿಳೆ 1500 ರೂ. ಹಣ ಕೊಟ್ಟಿದ್ದಾರೆ. ಆದ್ರೆ, ಅದಕ್ಕೆ ನಿರಾಕರಿಸಿದ ಡಿಜೆಯೊಂದಿಗೆ ಮಹಿಳೆಯರು ತೀವ್ರ ವಾಗ್ವಾದ ನಡೆಸಿದ್ದಾರೆ. ಸಿಬ್ಬಂದಿ ಜತೆ ಜಟಾಪಟಿ ತಾರಕಕ್ಕೇರಿದ ಬೆನ್ನಲ್ಲೇ ಮಧ್ಯಪ್ರವೇಶಿಸಿದ ಪಬ್ ಬೌನ್ಸರ್‌ಗಳು ಮೂವರು ಮಹಿಳೆಯರ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಅವರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಮಹಿಳೆಯರ ಬಟ್ಟೆಯನ್ನು ಕಿಡಿಗೇಡಿಗಳು ಹರಿದಿದ್ದಾರೆ. ಸಹಾಯ ಪಡೆಯಲು ತಕ್ಷಣವೇ ಪೊಲೀಸರಿಗೆ ಕರೆ ಮಾಡುವ ವೇಳೆ ಬೌನ್ಸರ್‌ಗಳು ಸ್ಥಳದಿಂದ ಪರಾರಿಯಾಗಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 323 (ಹಲ್ಲೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಹೆಚ್ಚುವರಿಯಾಗಿ, ಮಧ್ಯರಾತ್ರಿಯವರೆಗೆ ಅಧಿಕ ಸೌಂಡ್ ಬಳಸಿ ಹಾಡುಗಳನ್ನು ಪ್ಲೇ ಮಾಡಿದ ಡಿಜೆ ವಿರುದ್ಧ ಮತ್ತೊಂದು ಎಫ್‌ಐಆರ್ ಹಾಕಿದ್ದಾರೆ. ಮಿಕ್ಸರ್, ಸ್ಪೀಕರ್ ಸೇರಿದಂತೆ ಡಿಜೆ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ,(ಏಜೆನ್ಸೀಸ್).