

ನವದೆಹಲಿ: ಸಾಮಾನ್ಯವಾಗಿ ಪೊಲೀಸರನ್ನು ನೋಡಿದರೆ ಕಿಡಿಗೇಡಿಗಳು ಕಾಲ್ಕೀಳುತ್ತಾರೆ. ಇಲ್ಲದಿದ್ದರೂ ಎದುರಿಗಾದರೂ ಸ್ವಲ್ಪ ಎಚ್ಚರಿಕೆಯಿಂದ ಇರುತ್ತಾರೆ. ಆದರೆ ಇಲ್ಲಿಬ್ಬರು ಕಿಡಿಗೇಡಿಗಳು ಪೊಲೀಸ್ ಕಾನ್ಸ್ಟೆಬಲ್ ತಲೆಗೇ ಬಿಯರ್ ಬಾಟಲಿಯಿಂದ ಹೊಡೆದಿದ್ದಾರೆ.
ಆರೋಪಿ ಕಿಡಿಗೇಡಿಗಳು ಮಾ. 10ರಂದು ನವದೆಹಲಿಯ ಸರೈ ರೊಹಿಲ್ಲಾ ಪ್ರದೇಶದಲ್ಲಿ ಕಾರು ನಿಲ್ಲಿಸಿಕೊಂಡು ದೊಡ್ಡದಾದ ಶಬ್ದದೊಂದಿಗೆ ಸಂಗೀತ ಹಾಕಿಕೊಂಡು ಮೋಜು ಮಸ್ತಿ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಗಸ್ತಿನಲ್ಲಿದ್ದ ಪೊಲೀಸರು ಅವರ ಬಳಿ ವಾಲ್ಯೂಮ್ ಕಡಿಮೆ ಮಾಡುವಂತೆ ಹೇಳಿದ್ದರು. ಆಗ ವಾಗ್ವಾದ ನಡೆಸಿದ್ದಲ್ಲದೆ ಪೊಲೀಸ್ ಕಾನ್ಸ್ಟೆಬಲ್ ತಲೆಗೇ ಬಿಯರ್ ಬಾಟಲಿಯಿಂದ ಹೊಡೆದು ಪರಾರಿಯಾಗಿದ್ದರು. ಆ ಪೈಕಿ ಇಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಇನ್ನೊಬ್ಬನಿಗಾಗಿ ಶೋಧ ಮುಂದುವರಿಸಿದ್ದಾಗಿ ತಿಳಿಸಿದ್ದಾರೆ.