

ಕೊಳ್ಳೇಗಾಲ: ನರಹಂತಕ ವೀರಪ್ಪನ್ ಸಹಚರ ವೇಲೆಯನ್ ಪತ್ನಿ ಸೆಲ್ವಮೇರಿಯನ್ನು ಇಂದು ಬಂಧಿಸಲಾಗಿದೆ. ಈಕೆ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ತಲೆಮರೆಸಿಕೊಂಡಿದ್ದಳು.
ವೇಲೆಯನ್ ಹಾಗೂ ಆತನ ಪತ್ನಿ ಸೆಲ್ವಮೇರಿ ಇಬ್ಬರೂ ಪಾಲಾರ್ ಬಾಂಬ್ ಸ್ಫೋಟ, ರಾಮಾಪುರ ಠಾಣೆ ಮೇಲೆ ಎರಡು ಬಾರಿ ದಾಳಿ ಮಾಡಿ ಶಸ್ತ್ರಾಸ್ತ್ರ ಕಳ್ಳತನ ಮಾಡಿದ್ದರು. ಪೊಲೀಸರು ಇವರಿಬ್ಬರನ್ನೂ ಹುಡುಕುತ್ತಿದ್ದರು. ಆದರೆ ದಂಪತಿ ಕಾಡಂಚಿನ ಗ್ರಾಮಗಳಲ್ಲಿ ತಲೆ ಮರೆಸಿಕೊಂಡಿದ್ದರು. ಈ ಮಧ್ಯೆ ವೇಲೆಯನ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಅದಾದ ಬಳಿಕ ಸೆಲ್ವಮೇರಿ ಇನ್ನೊಂದು ಮದುವೆಯಾಗಿ ಕೊಳ್ಳೇಗಾಲದ ಜಾಗೇರಿಯಲ್ಲಿ ಇದ್ದಳು. ಅದನ್ನು ಪತ್ತೆ ಹಚ್ಚಿದ ಪೊಲೀಸರು ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಸೆಲ್ವೇಮೇರಿ ವೀರಪ್ಪನ್ ತಂಡ ಸೇರಿದ್ದು ಹೀಗೆ
ವೀರಪ್ಪನ್ ಕಾಡಿನಲ್ಲಿ ಭೂಮಿಯೊಳಗೆ ಅಡಗಿಸಿಟ್ಟಿದ್ದ ಹಣ ಸೆಲ್ವೇಮರಿ ಭಾವ ಶೇಷರಾಜ್ಗೆ ಸಿಕ್ಕಿತ್ತು. ಆ ಹಣದಲ್ಲಿ ಜಮೀನು ಖರೀದಿಸಲು ಶೇಷರಾಜ್ ಪ್ರಯತ್ನಿಸುತ್ತಿದ್ದ. ಈ ವಿಷಯ ತಿಳಿದ ವೀರಪ್ಪನ್ ಶೇಷರಾಜ್ ಮತ್ತು ಆತನ ಪತ್ನಿ, ನಾದಿನಿ ಸೆಲ್ವಮೇರಿಯನ್ನು ಕಾಡಿಗೆ ಕರೆಸಿದ್ದ.
ಇದರಿಂದ ಭಯಗೊಂಡಿದ್ದ ಶೇಷರಾಜ್ ಹಣ ವಾಪಸ್ ನೀಡಲು ಒಪ್ಪಿಕೊಂಡು ತಮ್ಮನ್ನು ಬಿಟ್ಟುಬಿಡುವಂತೆ ಕೇಳಿಕೊಂಡ. ಆದರೆ ಸೆಲ್ವಮೇರಿಯನ್ನು ನೋಡಿ ವೀರಪ್ಪನ್ ಸಹಚರ ವೇಲೆಯನ್ ಇಷ್ಟಪಟ್ಟಿದ್ದ. ಹಾಗಾಗಿ ವೀರಪ್ಪನ್ ಆಕೆಯನ್ನು ವೇಲೆಯನ್ ಜತೆ ವಿವಾಹ ಮಾಡಿಸಿ ತಮ್ಮ ತಂಡದೊಂದಿಗೇ ಉಳಿಸಿಕೊಂಡಿದ್ದ.