

Mehraj Malik: ಜಮ್ಮು-ಕಾಶ್ಮೀರದ ದೋಡಾದಲ್ಲಿ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಆಪ್ ಶಾಸಕ ಮೆಹ್ರಾಜ್ ಮಲ್ಲಿಕ್ ಅವರನ್ನು ಪೊಲೀಸರು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತಂದ ಆರೋಪದ ಮೇಲೆ ಸೋಮವಾರ (ಸೆ. 08) ಬಂಧಿಸಿದ್ದು, ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ದೋಡಾದ ಡಾಕ್ ಬಂಗಲೆ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದಾಗ ಬಂಧಿಸಲಾಗಿದ್ದು, ಸದ್ಯ ಅವರನ್ನು ಭದರ್ವಾ ಜೈಲಿಗೆ ಸ್ಥಳಾಂತರಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಹಾಲಿ ಶಾಸಕರೊಬ್ಬರ ವಿರುದ್ಧ ಪಿಎಸ್ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.
ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ಮಲಿಕ್ ಅವರು ಬಿಜೆಪಿಯ ಗಜಯ್ ಸಿಂಗ್ ರಾಣಾ ಅವರನ್ನು 4,538 ಮತಗಳಿಂದ ಸೋಲಿಸಿ ದೋಡಾ ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದಿದ್ದರು. ಸರ್ಕಾರ ರಚನೆಯಲ್ಲಿ ಓಮರ್ ಅಬ್ದುಲ್ಲಾ ಸರ್ಕಾರಕ್ಕೆ ಬೆಂಬಲ ನೀಡಿದ್ದರು. ಆದರೆ ಸದ್ಯ ತಮ್ಮ ಬೆಂಬಲವನ್ನು ವಾಪಸ್ ಪಡೆದಿದ್ದು, ವಿಪಕ್ಷ ಸ್ಥಾನದಲ್ಲಿ ಇದ್ದಾರೆ.
ಇನ್ನು ಶಾಸಕ ಮಹ್ರಾಜ್ ಮಲ್ಲಿಕ್ ಬಂಧನ ಮತ್ತು ಅವರ ವಿರುದ್ಧ ಪಿಎಸ್ಎ ಅಡಿ ಕೇಸ್ ದಾಖಲಿಸಿದ್ದನ್ನು, ಪೀಪಲ್ಸ್ ಕಾನ್ಪರೆನ್ಸ್ ಅಧ್ಯಕ್ಷ, ಶಾಸಜ ಹಂದ್ವಾರ ಸಜಾದ್ ಲೋನ್ ಖಂಡಿಸಿದ್ದಾರೆ. ಇದು ಆತ್ಮರಹಿತ ಪ್ರಜಾಪ್ರಭುತ್ವ,ಇಂತಹ ಕ್ರಮಗಳು ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಕೇವಲ ಒಂದು ಮುಖವಾಡಕ್ಕೆ ಇಳಿಸುತ್ತವೆ. ಚುನಾವಣೆಗಳು ನಡೆದರೂ ಜನರ ತೀರ್ಪು ಶಕ್ತಿಹೀನವಾಗಿಯೇ ಉಳಿದಿದೆ. ಜೆ & ಕೆ ಜನರ ಇಚ್ಛೆಗೆ ಇನ್ನೂ ಅಧೀನವಾಗಿದೆ. ಚುನಾಯಿತ ಪ್ರತಿನಿಧಿಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸುವ ಹಕ್ಕನ್ನು ನಿರಾಕರಿಸಿದರೆ ಚುನಾವಣೆಗಳನ್ನು ನಡೆಸುವ ಉದ್ದೇಶವೇನು? ಎಂದು ಕಿಡಿಕಾರಿದ್ದಾರೆ.
ಪಿಡಿಪಿ ನಾಯಕ, ಶಾಸಕ ವಹೀದ್ ಪರ್ರಾ ಕೂಡ ಬಂಧವನ್ನು ಖಂಡಿಸಿದ್ದು, ಇಂತಹ ಕಠಿಣ ಕಾನೂನುಗಳನ್ನು ರಾಜಕೀಯ ಧ್ವನಿಗಳನ್ನು ಅಡಗಿಸಲು ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಅಸ್ತ್ರವಾಗಿ ಬಳಸಲಾಗುತ್ತದೆ. ಇಂತಹ ಸರ್ವಾಧಿಕಾರಿ ಕ್ರಮಗಳು ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯಗಳನ್ನು ಪರಿಹರಿಸಲು ಯಾವುದೇ ಮಾರ್ಗವಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)