

ಬಲ್ಲಿಯಾ: ಪಾಕ್ ಆಕ್ರಮಿತ ಕಾಶ್ಮೀರ ಶೀಘ್ರದಲ್ಲೇ ಭಾರತದೊಳಗೆ ಸೇರ್ಪಡೆಗೊಳ್ಳುತ್ತದೆ. ಅಲ್ಲಿ ಭಾರತದ ಧ್ವಜವನ್ನು ಆರೋಹಣ ಮಾಡಲಾಗುತ್ತದೆ ಎಂದು ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲ ಹೇಳಿದ್ದಾರೆ.
ಕಾಶ್ಮೀರದ ವಿಷಯವಾಗಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹೀದ್ ಆಫ್ರಿದಿ ನೀಡಿದ್ದ ಹೇಳಿಕೆಗೆ ಅವರು ಗುರುವಾರ ಪ್ರತಿಕ್ರಿಯಿಸಿದರು.
ಪಾಕಿಸ್ತಾನ ಅಕ್ರಮವಾಗಿ ಕಾಶ್ಮೀರದ ಒಂದು ಭಾಗವನ್ನು ಆಕ್ರಮಿಸಿಕೊಂಡಿದೆ. ಇದನ್ನು ಶೀಘ್ರದಲ್ಲೇ ಬಿಡಿಸಿಕೊಂಡು, ಅದನ್ನು ಭಾರತದ ಭಾಗವನ್ನಾಗಿ ಮಾಡಿಕೊಳ್ಳಲಾಗುವುದು ಎಂದು ಶುಕ್ಲಾ ಹೇಳಿದರು.
ಇದಕ್ಕೂ ಮುನ್ನ ಶಾಹೀದ್ ಆಫ್ರಿದಿ ಕಾಶ್ಮೀರದ ವಿಚಾರವಾಗಿ ಭಾರತವನ್ನು ವಾಚಾಮಗೋಚರವಾಗಿ ಟೀಕಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಮತೀಯ ದೌರ್ಜನ್ಯಗಳನ್ನು ಎಸಗುತ್ತಿರುವುದಾಗಿ ಆರೋಪಿಸಿದ್ದರು. ಅವರ ಈ ಹೇಳಿಕೆ ಬಗ್ಗೆ ಭಾರತದ ಮುಖಂಡರು ಮತ್ತು ರಾಜಕೀಯ ನೇತಾರರು ಅಲ್ಲದೆ ಭಾರತ ಕ್ರಿಕೆಟ್ ತಂಡದ ಆಟಗಾರರು ಕೂಡ ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಭಾರತದ ಬಗ್ಗೆ ಕೆಟ್ಟದಾಗಿ ಮಾತನಾಡುವವರು ಮತ್ತು ಬಂದೂಕನ್ನು ಗುರಿ ಮಾಡುತ್ತಿರುವವರನ್ನು ಭಾರತೀಯ ಸೇನಾಪಡೆ ನಿರ್ನಾಮ ಮಾಡುತ್ತಿದೆ. ಶಾಹೀದ್ ಆಫ್ರಿದಿ ಮತ್ತು ಅವರಂಥ ಜನರಿಗೆ ಒಂದು ವಿಷಯ ತಿಳಿಸಲು ಬಯಸುತ್ತೇನೆ. ಇದೇ ನರೇಂದ್ರ ಮೋದಿ ಮೊದಲ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದರು ಎಂಬುದನ್ನು ನೆನಪಿಸಲು ಬಯಸುವುದಾಗಿ ಹೇಳಿದರು.