

ಬೆಂಗಳೂರು: ಪೂರ್ವಾಪರ ಯೋಜನೆ, ಆರ್ಥಿಕ ಸಂಪನ್ಮೂಲ ಕ್ರೋಡೀಕರಣ ಮಾಡಿಕೊಳ್ಳದೆ ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಬೊಕ್ಕಸ ಬರದಾಗಿ ತಲೆದೋರಿದ ಆರ್ಥಿಕ ದುಃಸ್ಥಿತಿ ಮುಚ್ಚಿಡಲು ಕೇಂದ್ರದೆಡೆ ಪದೇ ಪದೆ ಬೊಟ್ಟು ತೋರಿಸುತ್ತಿದೆ ಎಂದು ಕಾಂಗ್ರೆಸ್‌ಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಬಿಜೆಪಿ ಮಾಧ್ಯಮ ಕೇಂದ್ರದದಲ್ಲಿ ಭಾನುವಾರ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ 15ನೇ ಹಣಕಾಸು ಆಯೋಗದ ಮಧ್ಯಂತರ ಪರಿಹಾರ ಮೊತ್ತ 5,495 ಕೋಟಿ ರೂ. ಕೊಟ್ಟಿಲ್ಲವೆಂದು ಮತ್ತೆ ಮತ್ತೆ ಹೇಳುತ್ತಾ ನೆರವಿನ ವಾಸ್ತವಿಕ ಅಂಕಿ-ಅಂಶಗಳನ್ನು ಮರೆಮಾಚಿದೆ ಎಂದು ಟೀಕಿಸಿದರು.
ನಿಗದಿಯಾಗಿದ್ದ ತೆರಿಗೆ ಪಾಲಿಗಿಂತ ಕಳೆದ ಆರ್ಥಿಕ ವರ್ಷಾಂತ್ಯಕ್ಕೆ ಹೆಚ್ಚುವರಿಯಾಗಿ ಐದು ಸಾವಿರ ಕೋಟಿ ರೂ. ಬಂದಿದೆ. 50 ವರ್ಷಗಳ ನಂತರ ಮರು ಪಾವತಿಸಲು ಅವಕಾಶ ಕಲ್ಪಿಸಿ, 6,212 ಕೋಟಿ ರೂ. ಬಡ್ಡಿರಹಿತ ಸಾಲ ನೀಡಿದ್ದನ್ನು ರಾಜ್ಯ ಸರ್ಕಾರ ಹೇಳುತ್ತಿಲ್ಲವೆಂದು ಹರಿಹಾಯ್ದರು.
ಕೇಂದ್ರಕ್ಕೆ ನೇರವಾಗಿ ಸಂದಾಯವಾಗು ತೆರಿಗೆ ಬಾಬತ್ತು ಸೇರಿಸಿ ರಾಜ್ಯದಿಂದ 4.30 ಲಕ್ಷ ಕೋಟಿ ರೂ. ಸಂದಾಯವಾಗುತ್ತಿದೆ. ರಾಜ್ಯ 100 ರೂ. ಕೊಟ್ಟರೆ 13 ರೂ. ವಾಪಸ್ ಬರುತ್ತಿದೆ ಎಂದು ಕಾಂಗ್ರೆಸ್ ನಾಯಕರು ಬೊಬ್ಬೆ ಹೊಡೆಯುತ್ತಿದ್ದಾರೆ.
ಇದೇ ಲೆಕ್ಕಾಚಾರವನ್ನು ಹಿಂದಿನ ಕಾಂಗ್ರೆಸ್ ನೇತೃತ್ವ ಯುಪಿಎ ಸರ್ಕಾರಕ್ಕೆ ಅನ್ವಯಿಸಿದರೆ, ರಾಜ್ಯ 100 ರೂ. ಕೊಟ್ಟರೆ ವಾಪಸ್ ನಾಲ್ಕು ರೂ. ಮಾತ್ರ ಬರುತ್ತಿತ್ತು. ಈಗ 13 ರೂ. ಬರುತ್ತಿದೆ ಎಂದು ಡಂಗುರ ಹೊಡೆಯುತ್ತಿರುವವರು ಹಿಂದೆ ನಾಲ್ಕು ರೂ. ಬರುತ್ತಿತ್ತು ಎನ್ನುವುದು ಒಪ್ಪಿಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದು ಬೊಮ್ಮಾಯಿ ಚಾಟಿ ಬೀಸಿದರು.
ಮೋದಿಯವರು ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ರಾಜ್ಯದ ತೆರಿಗೆ ಶೇ.27 ರಿಂದ 40ಕ್ಕೆ ಹೆಚ್ಚಿಸಿದರು. ತೆರಿಗೆ ಪಾಲು ಹಂಚಿಕೆ, ಸಹಾಯಾನುದಾನ ವಿತರಣೆ, ಎನ್‌ಡಿಆರ್‌ಎ್ ನಿಯಮ ಪರಿಷ್ಕರಣೆ ಸೇರಿ ಸಾಕಷ್ಟು ಸುಧಾರಣೆಗಳನ್ನು ಮಾಡಿದ್ದಾರೆ.
ಪ್ರತಿಪಕ್ಷಗಳ ನಾಯಕರು 1987-88ರಲ್ಲಿ ಬೆಂಗಳೂರಿನಲ್ಲಿ ಸಮಾವೇಶಗೊಂಡು ಕೇಂದ್ರದ ತೆರಿಗೆ ಪಾಲು ಶೇ.27 ರಿಂದ 37ಕ್ಕೇರಿಸಲು ಒತ್ತಾಯಿಸಿದರು. ಆಗ ಅಧಿಕಾರದಲ್ಲಿದ್ದ ಕಾಂಗ್ರೆಸ್ ಒಪ್ಪಿಕೊಂಡಿತೆ ? ಈ ಅಸಲಿಯತ್ತು ಜನರಿಗೆ ಗೊತ್ತಿದ್ದು, ಕಾಂಗ್ರೆಸ್ ಅಷ್ಟು ಸುಲಭವಾಗಿ ನಂಬಿಸಲಾಗದು ಎಂದರು.
ಯುಪಿಎ ಆಡಳಿತದ 10 ವರ್ಷಗಳಲ್ಲಿ ರಾಜ್ಯಕ್ಕೆ 81,795.19 ಕೋಟಿ ರೂ. ತೆರಿಗೆ ಪಾಲು, 60,779.84 ಕೋಟಿ ರೂ. ಸಹಾಯಾನುದಾನ ಹಂಚಿಕೆಯಾಗಿದೆ. ಎನ್‌ಡಿಎ ಆಡಳಿತದ 10 ವರ್ಷಗಳಲ್ಲಿ ತೆರಿಗೆ ಪಾಲು 2,82,791 ಕೋಟಿ ರೂ. ಹಾಗೂ ಸಹಾಯಾನುದಾನ 2,08,832 ಕೋಟಿ ರೂ. ರಾಜ್ಯಕ್ಕೆ ಬಂದಿದೆ.
ಬಜೆಟ್ ಗಾತ್ರಕ್ಕೆ ತಕ್ಕಂತೆ ಹಂಚಿಕೆಯಾಗುತ್ತದೆ ನಿಜ. ಹಾಗೆಯೇ ಯುಪಿಎ ಆಡಳಿತಾವಧಿ ಬಜೆಟ್ ಗಾತ್ರಕ್ಕೆ ತಕ್ಕಂತೆ ತೆರಿಗೆ ಪಾಲು, ಸಹಾಯಾನುದಾನ ಹಂಚಿಕೆಯಾಗಲಿಲ್ಲವೇಕೆ ?, ತುಲನಾತ್ಮಕ ಅಂಕಿ-ಅಂಶಗಳನ್ನು ಜನರ ಮುಂದಿಡಲು ಕಾಂಗ್ರೆಸ್‌ಗೆ ಹಿಂಜರಿಕೆ ಏಕೆ ? ಎಂದು ಕೇಳಿದರು.
ಮೋದಿಯವರದು ಅಕ್ಷಯಪಾತ್ರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸರಿಯಾಗಿ ವ್ಯಾಖ್ಯಾನಿಸಿದ್ದಾರೆ. ಕಳೆದ ಒಂದು ದಶಕದಲ್ಲಿ ಹೆದ್ದಾರಿ, ರೈಲ್ವೆ, ಆರೋಗ್ಯ ಮೂಲಸವಲತ್ತು, ಉಚಿತ ಅಕ್ಕಿ, ವಸತಿ ಮತ್ತಿತರ ಅಭಿವೃದ್ಧಿ ಯೋಜನೆಗಳಡಿ ರಾಜ್ಯಕ್ಕೆ ಲಕ್ಷಾಂತರ ಕೋಟಿ ರೂ. ನೆರವಿನ ಅಕ್ಷಯ ಪಾತ್ರೆಯನ್ನೇ ನೀಡಿದ್ದಾರೆ.
ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಕಿಸಾನ್ ಸಮ್ಮಾನ್ ನಿಧಿ ನಾಲ್ಕು ಸಾವಿರ ರೂ., ರೈತ ವಿದ್ಯಾನಿಧಿ ನಿಲ್ಲಿಸಿ ರೈತರಿಗೆ ಚೊಂಬು ಕೊಟ್ಟಿದೆ. ಸೀಸಾಮರ್ಥ್ಯ ಯೋಜನೆಯಡಿ ಸೀ ಶಕ್ತಿ ಸ್ವಸಹಾಯ ಗುಂಪುಗಳಿಗೆ ನೀಡುತ್ತಿದ್ದ ಐದು ಲಕ್ಷ ನೆರವು, ಶಾಲಾ ಕೊಠಡಿಗಳ ನಿರ್ಮಾಣ, ನೀರಾವರಿ ಸೇರಿ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿ ಚೊಂಬು ನೀಡಿದೆ ಎಂದು ಬೊಮ್ಮಾಯಿ ಕಾಲೆಳೆದರು.