ಸಂಪಾದಕೀಯ | ಕಳವಳಕಾರಿ ಬೆಳವಣಿಗೆ

pocso case
Published on

ದೇಶದಲ್ಲಿ ಹೆಚ್ಚಿದ ಪೋಕ್ಸೊ ಪ್ರಕರಣಗಳು

ದೇಶದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಒಂದು ಭಯಾನಕ ಸಾಮಾಜಿಕ ರೋಗವಾಗಿ ಬೆಳೆಯುತ್ತಿರುವುದನ್ನು ಅಂಕಿಅಂಶಗಳು ಖಚಿತಪಡಿಸುತ್ತಿವೆ. 2017ರಿಂದ 2022ರವರೆಗೆ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (ಪೋಕ್ಸೊ) ಅಡಿಯಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ 33,210ರಿಂದ 64,469ಕ್ಕೆ (ಶೇ. 94) ಏರಿಕೆಯಾಗಿದೆ. ಇವು ಕೇವಲ ಸಂಖ್ಯೆಗಳಲ್ಲ, ಸಾವಿರಾರು ಮಕ್ಕಳ ಭಾವನಾತ್ಮಕ, ದೈಹಿಕ ಮತ್ತು ಮಾನಸಿಕ ಹಿಂಸೆಗೆ ಹಿಡಿದ ಕನ್ನಡಿ. ಇವೆಲ್ಲವೂ ವರದಿಯಾಗಿರುವ ಪ್ರಕರಣಗಳು. ವರದಿಯಾಗದೇ ಉಳಿದ ಪ್ರಕರಣಗಳು ಇನ್ನೂ ಎಷ್ಟಿವೆಯೋ ಏನೋ! ಹಾಗಾಗಿ ಇದು ಸಮಸ್ಯೆಯ ನೈಜ ವಸ್ತುಸ್ಥಿತಿಯಲ್ಲ; ಒಟ್ಟು ಪ್ರಕರಣಗಳ ಸಂಖ್ಯೆ ಇನ್ನೂ ಎಷ್ಟೋ ಪಟ್ಟು ಜಾಸ್ತಿ ಇದೆ ಎನ್ನುತ್ತದೆ ಚೈಲ್ಡ್​ಲೈಟ್ ಸಂಸ್ಥೆಯ ‘ಇಂಟು ದಿ ಲೈಟ್ ಇಂಡೆಕ್ಸ್ 2025’ ವರದಿ. 2024ರಲ್ಲಿ ಭಾರತದಲ್ಲಿ 2.25 ದಶಲಕ್ಷ ಮಕ್ಕಳ ಲೈಂಗಿಕ ದೌರ್ಜನ್ಯ (ಸಿಎಸ್​ಎಎಂ) ವರದಿಗಳು ನೋಂದಣಿ ಆಗಿದ್ದು, ಇದು ಇಡೀ ದಕ್ಷಿಣ ಏಷ್ಯಾದಲ್ಲಿಯೇ ಅತಿ ಹೆಚ್ಚು. ಇದಲ್ಲದೆ, 2023ರಿಂದ 2024ರವರೆಗೆ ಕೃತಕ ಬುದ್ಧಿಮತ್ತೆ ಆಧರಿತವಾದ ಇಂತಹ ದೌರ್ಜನ್ಯ ಪ್ರಕರಣಗಳ ಪ್ರಮಾಣ ಶೇ. 1,325ರಷ್ಟು ಏರಿಕೆಯಾಗಿರುವುದು ಡಿಜಿಟಲ್ ಲೋಕದ ಹೊಸ ರೀತಿಯ ಅಪಾಯಕ್ಕೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್​ಸಿಆರ್​ಬಿ) ಇತ್ತೀಚೆಗೆ ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಕರ್ನಾಟಕದಲ್ಲಿ 2022ರಲ್ಲಿ 3209 ಪೋಕ್ಸೊ ಪ್ರಕರಣಗಳು ವರದಿಯಾಗಿದ್ದವು. ಇದು 2023ರಲ್ಲಿ 3898ಕ್ಕೆ ಮತ್ತು 2024ರಲ್ಲಿ 4019ಕ್ಕೆ ಏರಿತು. ರಾಷ್ಟ್ರ ಮಟ್ಟದಲ್ಲಿ 2023ರ ವೇಳೆಗೆ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳಲ್ಲಿ 1.3 ಲಕ್ಷ ಪ್ರಕರಣಗಳು ಬಾಕಿ ಇದ್ದವು. 2022ರಲ್ಲಿ ಅಪರಾಧ ಸಾಬೀತು ದರ ಕೇವಲ ಶೇ. 3ರಷ್ಟಿತ್ತು. ಮುಂಬೈಯಲ್ಲಿ 2024ರಲ್ಲಿ ಪೋಕ್ಸೊ ಪ್ರಕರಣಗಳು ಶೇ. 21ರಷ್ಟು ಏರಿಕೆಯಾಗಿ 1341ಕ್ಕೆ ತಲುಪಿವೆ. ಈ ಏರಿಕೆಗೆ ನಗರೀಕರಣ, ಸೋಶಿಯಲ್ ಮೀಡಿಯಾದ ಅತಿಯಾದ ಪ್ರಭಾವ, ಕುಟುಂಬಗಳಲ್ಲಿ ಮಕ್ಕಳ ಸುರಕ್ಷತೆಯ ಕೊರತೆ ಸೇರಿದಂತೆ ಹಲವು ಕಾರಣಗಳು ಇವೆ. ಈ ಸಮಸ್ಯೆಯ ನಿವಾರಣೆ ಸುಲಭವಾಗಿಲ್ಲ ನಿಜ. ಆದರೆ ಆ ದಿಸೆಯಲ್ಲಿ ಈಗಲಾದರೂ ದೃಢ ಹೆಜ್ಜೆಗಳನ್ನು ಇಡುವುದು ಅನಿವಾರ್ಯ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇನ್ನೂ ಹೆಚ್ಚು ಕಠಿಣ ಮತ್ತು ಪರಿಣಾಮಕಾರಿ ನೀತಿಗಳನ್ನು ರೂಪಿಸುವುದು ಅಗತ್ಯ. ಪೋಕ್ಸೊ ಕಾಯ್ದೆಯನ್ನು ಬಲಪಡಿಸಲು ಇನ್ನೂ ಹೆಚ್ಚಿನ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ವಿಶೇಷ ತರಬೇತಿ ಪಡೆದ ಪೊಲೀಸ್ ಸಿಬ್ಬಂದಿಯ ನೇಮಕ ಮಾಡಬೇಕು. ಋಣಾತ್ಮಕ ಪರಿಣಾಮ ಬೀರುವ ಎಐ ಜನರೇಟೆಡ್ ಕಂಟೆಂಟನ್ನು ಗುರುತಿಸಿ ನಿಷೇಧಿಸುವ ವ್ಯವಸ್ಥೆ ಜಾರಿಗೆ ಬರಬೇಕು. ಕೌಟುಂಬಿಕ ಜಾಗೃತಿ ಅಭಿಯಾನಗಳನ್ನು ತಳಮಟ್ಟದಲ್ಲಿ ಆರಂಭಿಸಬೇಕು. ಮಕ್ಕಳಿಗೆ ಮನೋವೈದ್ಯಕೀಯ ನೆರವು ಉಚಿತವಾಗಿ ಸಿಗುವಂತೆ ಮಾಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ಈ ಪಿಡುಗನ್ನು ‘ಸಾರ್ವಜನಿಕ ಆರೋಗ್ಯ ತುರ್ತ’ ಎಂದು ಘೊಷಿಸಲು ಸರ್ಕಾರ ಹಿಂಜರಿಯಬಾರದು. ಈ ವಿಷಯದಲ್ಲಿ ಸರ್ಕಾರದ ಜವಾಬ್ದಾರಿಗಿಂತ ಸಾರ್ವಜನಿಕರ ಸಾಮೂಹಿಕ ಹೊಣೆಗಾರಿಕೆ ಹೆಚ್ಚಾಗಿದೆ. ಮಕ್ಕಳು ನಮ್ಮ ಭವಿಷ್ಯ; ಅವರ ರಕ್ಷಣೆ ಮಾಡದೆ ದೇಶದ ಭವಿಷ್ಯವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಈಗಿನಿಂದಲೇ ಕ್ರಮಗಳನ್ನು ಪ್ರಾರಂಭಿಸಿದರೆ ಸುರಕ್ಷಿತ ಭಾರತವನ್ನು ನಿರ್ವಿುಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net