

Jairam Ramesh: ಕೆಂಪು ಕೋಟೆಯಲ್ಲಿನ ಸ್ವಾತಂತ್ರ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಮಿಕಂಡಕ್ಟರ್‌ಗಳ ಕುರಿತು ಮಾಡಿದ ಆರೋಪಕ್ಕೆ ಕಾಂಗ್ರೆಸ್ ಸಂಸದ ಜೈರಾಮ್ ರಮೇಶ್ ತೀರುಗೇಟು ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಜೈರಾಮ್ ರಮೇಶ್, ಮೋದಿ ಎಂತಹ ಮಹಾನ್ ಸುಳ್ಳುಗಾರ (Pathological liar) ಎಂಬುದಕ್ಕೆ ಇದು ತಾಜಾ ಉದಾಹರಣೆ ಎಂದರು.
ಚಂಡೀಗಢದಲ್ಲಿರುವ ಸೆಮಿಕಂಡಕ್ಟರ್ಸ್ ಕಾಂಪ್ಲೆಕ್ಸ್ ಲಿಮಿಟೆಡ್ ಈಗಾಗಲೇ 1983 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದ ಕಾಂಗ್ರೆಸ್ ನಾಯಕರು, ಭಾರತವು ಸೆಮಿಕಂಡಕ್ಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸುವುದನ್ನು 50-60 ವರ್ಷಗಳ ಹಿಂದೆ ಚರ್ಚಿಸಲಾಗಿದ್ದರೂ, ಅದು ಇಂದಿಗೂ ಕಾರ್ಯರೂಪಕ್ಕೆ ಬರಲಿಲ್ಲ ಎಂಬ ಪ್ರಧಾನಿಯವರೇ ಹೇಳುವುದು ಸರಿ ಅಲ್ಲ ಎಂದರು.
ಎರಡು ಸೆಮಿಕಂಡಕ್ಟರ್ ಉತ್ಪಾದನಾ ಯೋಜನೆಗಳನ್ನು ತೆಲಂಗಾಣದಿಂದ ಗುಜರಾತ್‌ಗೆ ಸ್ಥಳಾಂತರಿಸಬೇಕಾಯಿತು. ಅದೇ ರೀತಿ, ತಮಿಳುನಾಡಿಗೆ ಯೋಜಿಸಲಾದ ಮತ್ತೊಂದು ಕಾರ್ಖಾನೆಯು ಗುಜರಾತ್‌ಗೆ ಸ್ಥಳಾಂತರಗೊಳ್ಳಬೇಕೆಂಬ ಷರತ್ತಿನ ಮೇಲೆ ಅನುಮೋದನೆ ಪಡೆಯಿತು ಎಂದು ಜೈರಾಮ್ ರಮೇಶ್ ಉಲ್ಲೇಖಿಸಿದ್ದಾರೆ.
ಭಾರತವನ್ನು ಬಲಿಷ್ಠಗೊಳಿಸುವ ರಾಜ್ಯಗಳ ನಡುವಿನ ಸ್ಪರ್ಧೆಯ ಬಗ್ಗೆ ಮಾತನಾಡುವ ಪ್ರಧಾನಿ, ಅಂಪೈರ್ ಸ್ಥಾನದಲ್ಲಿ ನಿಂತುಕೊಂಡು ಸ್ಪಷ್ಟವಾಗಿ ಪಕ್ಷಪಾತ ತೋರಿದರೆ ಸ್ಪರ್ಧೆಯೇ ಹಾಸ್ಯಾಸ್ಪದವಾಗುತ್ತದೆ ಎಂದರು.
ನಮ್ಮ ದೇಶದಲ್ಲಿ ಸೆಮಿಕಂಡಕ್ಟರ್‌ಗಳ ಕುರಿತಾದ ಫೈಲ್ ಕೆಲಸ 50-60 ವರ್ಷಗಳ ಹಿಂದೆ ಪ್ರಾರಂಭವಾಯಿತು. ಅದನ್ನು 50-60 ವರ್ಷಗಳ ಹಿಂದೆ ಗರ್ಭದಲ್ಲಿಯೇ ಕೊಲ್ಲಲಾಯಿತು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ನಾವು 50-60 ವರ್ಷಗಳನ್ನು ಕಳೆದುಕೊಂಡಿದ್ದೇವೆ" ಎಂದು ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದರು.
2025 ರ ಅಂತ್ಯದ ವೇಳೆಗೆ ಭಾರತ ತನ್ನದೇ ಆದ ಸೆಮಿಕಂಡಕ್ಟರ್ ಚಿಪ್‌ಗಳನ್ನು ಬಿಡುಗಡೆ ಮಾಡಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದರು. ಸೆಮಿಕಂಡಕ್ಟರ್ ಉತ್ಪಾದನೆಯನ್ನು ಮುನ್ನಡೆಸಲು ದೇಶವು ಈಗ "ಮಿಷನ್ ಮೋಡ್" ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.(ಏಜೆನ್ಸೀಸ್)