ಅಂಗವಿಕಲನಿಗೆ ಆಧಾರ್ ಕೊಡಿಸಿದ ಪಿಎಂ ಕಚೇರಿ! ಎರಡು ವರ್ಷದ ಸಮಸ್ಯೆಗೆ ಮುಕ್ತಿ

dfgs
Published on

|ಕೆ.ಎನ್.ರಾಘವೇಂದ್ರ ಮಂಡ್ಯ

ಪ್ರಸ್ತುತ ಆಧಾರ್​ಕಾರ್ಡ್ ಪಡೆಯುವುದು ಸವಾಲಿನ ಕೆಲಸವಾಗಿದೆ. ಸರ್ವರ್, ಬೆರಳಚ್ಚು ಸೇರಿ ಹಲವು ತೊಂದರೆ ಎದುರಾಗುತ್ತವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಪ್ರಧಾನಮಂತ್ರಿ ಕಚೇರಿಯಿಂದಲೇ ಆಧಾರ್ ಕಾರ್ಡ್ ಪಡೆಯಲು ನೆರವು ಸಿಕ್ಕಿದ್ದು, ಬರೋಬ್ಬರಿ ಎರಡು ವರ್ಷದ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಇದಕ್ಕೆ ಆರ್ಗ್ಯಾನಿಕ್ ಮಂಡ್ಯ ಸಂಸ್ಥಾಪಕ ಎಸ್.ಸಿ.ಮಧುಚಂದನ್ ಟ್ವೀಟ್ ಕಾರಣವಾಗಿರುವುದು ವಿಶೇಷ.

ತಾಲೂಕಿನ ತಂಡಸನಹಳ್ಳಿ ಗ್ರಾಮದ ನೂತನ್ ಎಂಬ 25 ವರ್ಷದ ಅಂಗವಿಕಲ ಯುವಕನಿಗೆ ಪಿಎಂ ಕಚೇರಿಯಿಂದಲೇ ಆಧಾರ್ ಕಾರ್ಡ್ ಸಿಗುವಂತಾಗಿದೆ. ಇದರಿಂದಾಗಿ ಯುವಕನಿಗೆ ಸರ್ಕಾರದಿಂದ ಎಲ್ಲ ಸೌಲಭ್ಯ ಸಿಗುವಂತಾಗಿದೆ.

ಏನಿದು ಪ್ರಕರಣ?: ಹಲವು ವರ್ಷಗಳ ಹಿಂದೆಯೇ ನೂತನ್ ಆಧಾರ್​ಕಾರ್ಡ್ ಮಾಡಿಸಿದ್ದರು. ಆದರೆ ಆ ವೇಳೆ ಮೊಬೈಲ್ ಸಂಖ್ಯೆ ನಮೂದಿಸಿರಲಿಲ್ಲ. ಎರಡು ವರ್ಷದ ಹಿಂದೆ ಸರ್ಕಾರದಿಂದ ಯುವಕನ ಬ್ಯಾಂಕ್ ಖಾತೆಗೆ ಹಣ ಬಾರದಿರುವುದರ ಕುರಿತು ವಿಚಾರಿಸಲು ಹೋದಾಗ, ಆಧಾರ್​ನಲ್ಲಿ ಮೊಬೈಲ್ ಸಂಖ್ಯೆ ಅಪ್​ಡೇಟ್ ಆಗದಿರುವ ಬಗ್ಗೆ ತಿಳಿಸಿದ್ದಾರೆ. ನಂತರ ಅಪ್​ಡೇಟ್ ಮಾಡಿಸಿಕೊಳ್ಳಲು ಹೋದಾಗ ಸಾಧ್ಯವಾಗಿಲ್ಲ. ಯುವಕನಿಗೆ ಚರ್ಮದ ಸಮಸ್ಯೆ ಇದ್ದ ಕಾರಣ ಬಯೋಮೆಟ್ರಿಕ್ ತೆಗೆದುಕೊಂಡಿಲ್ಲ. ಇತ್ತ ಕಣ್ಣಿನ ಸ್ಕ್ಯಾನ್ ಕೂಡ ಆಗಲಿಲ್ಲ. ಇದರಿಂದಾಗಿ ಆಧಾರ್​ಕಾರ್ಡ್ ಕೂಡ ಬ್ಲಾಕ್ ಆಗಿತ್ತು. ಪರಿಣಾಮ, ಸರ್ಕಾರದ ಸೌಲಭ್ಯ ಪಡೆಯಲಾಗದೆ ಪರಿತಪಿಸುವಂತಾಗಿತ್ತು. ಈ ಹಿನ್ನೆಲೆಯಲ್ಲಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಡಳಿತವನ್ನು ಭೇಟಿ ಮಾಡಲಾಗಿತ್ತಾದರೂ ಪ್ರಯೋಜನವಾಗಲಿಲ್ಲ. ಸಂಸದೆ ಸುಮಲತಾ ಪತ್ರ ಕೊಟ್ಟರೂ ಸಮಸ್ಯೆ ಬಗೆಹರಿಯಲಿಲ್ಲ. ಇದು ಕುಟುಂಬಸ್ಥರನ್ನು ಇನ್ನಷ್ಟು ಚಿಂತೇಗಿಡು ಮಾಡಿತ್ತು.

ಸ್ನೇಹಿತರೊಬ್ಬರ ಸಲಹೆಯಂತೆ ಕುಟುಂಬದವರು ಮಧುಚಂದನ್ ಭೇಟಿ ಮಾಡಿ ಸಮಸ್ಯೆಯನ್ನು ವಿವರಿಸಿದ್ದರು. ಮೇ 27ರಂದು ಮಾಹಿತಿ ಪಡೆದ ಮಧು, 28ರಂದು ಪಿಎಂ ಕಚೇರಿಗೆ ಆನ್​ಲೈನ್​ನಲ್ಲಿಯೇ ಪತ್ರ ಬರೆದರು. ಜತೆಗೆ, ಮಾಹಿತಿಯನ್ನು ಟ್ವೀಟ್ ಮಾಡಿ ಪಿಎಂ ಕಚೇರಿಗೆ ಟ್ಯಾಗ್ ಮಾಡಿದ್ದರು. ಇದಕ್ಕೆ ಕೂಡಲೇ ಸ್ಪಂದಿಸಿದ ಅಧಿಕಾರಿಗಳು, ಬೆಂಗಳೂರಿನ ಕಚೇರಿಗೆ ಮಾಹಿತಿ ರವಾನಿಸಿದ್ದಾರೆ. ಮೇ 29ರಂದು ಬೆಂಗಳೂರಿನ ಆಧಾರ್​ಕಾರ್ಡ್ ಕಚೇರಿಯಿಂದ ಮಧುಚಂದನ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಲಾಗಿದೆ. ಮರುದಿನವೇ ಹಳೆಯ ಆಧಾರ್ ಕಾರ್ಡ್ ಆಕ್ಟಿವ್​ಗೊಳಿಸಿ ಅಪ್​ಡೇಟ್ ಮಾಡಿಕೊಡಲಾಗಿದೆ. ಇದರಿಂದಾಗಿ ಈಗ ಎಲ್ಲ ಸಮಸ್ಯೆ ಬಗೆಹರಿದಂತಾಗಿದೆ. ಎರಡು ವರ್ಷದಿಂದ ಆಧಾರ್​ಕಾರ್ಡ್ ಮಾಡಿಸಲಾಗದೆ ತೊಂದರೆಯಾಗಿತ್ತು. ಮಧುಚಂದನ್ ಎರಡೇ ದಿನದಲ್ಲಿ ಮಾಡಿಸಿಕೊಟ್ಟಿದ್ದಾರೆ. ಅವರಿಗೆ ನಮ್ಮ ಕುಟುಂಬದ ಪರವಾಗಿ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ನೂತನ್ ಅಕ್ಕ ಸಂಧ್ಯಾ.

ಪಿಎಂ ಕಚೇರಿಗೆ ಪತ್ರ ಬರೆಯುವುದರ ಜತೆಗೆ, ಟ್ವೀಟ್ ಮಾಡಿದ್ದೆ. ಕೂಡಲೇ ಸ್ಪಂದನೆ ಸಿಕ್ಕಿತು. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾರ್ವಜನಿಕರ ಇಂತಹ ಕೆಲಸವನ್ನು ತ್ವರಿತವಾಗಿ ಮಾಡಬೇಕು.

| ಎಸ್.ಸಿ.ಮಧುಚಂದನ್ ‘ಆರ್ಗ್ಯಾನಿಕ್ ಮಂಡ್ಯ’ ಸಂಸ್ಥಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net